ಬಿಸಿಯೂಟ ಅಡುಗೆ ತಯಾರಿಕೆ ತರಬೇತಿ ಕಾರ್ಯಗಾರದಲ್ಲಿ ಶಾಸಕ ಟಿ.ರಘುಮೂರ್ತಿ ಭರವಸೆ ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಭಾನುವಾರ ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಮಟ್ಟದ ಬಿಸಿಯೂಟ ಮುಖ್ಯ ಹಾಗೂ ಸಹಾಯಕ ಅಡುಗೆ ತಯಾರಿಕರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಹಲವು ದಶಕಗಳಿಂದ ಬಿಸಿಯೂಟ ತಯಾರಕರು ಸೇವಾ ಭದ್ರತೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಾ ಬಂದಿದ್ದಾರೆ. ಎಐಟಿಯುಸಿ ನೇತೃತ್ವದ ಸಂಘಟನೆ ಇದರ ಜವಾಬ್ದಾರಿ ಹೊತ್ತಿದೆ. ನಾನು ಸಹ ಬಿಸಿಯೂಟ ತಯಾರಿಕರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತೇನೆ. ಈ ಬಾರಿಯ ಆಯವ್ಯಯ ಮಂಡನೆ ವೇಳೆ ನಿಮ್ಮ ಬೇಡಿಕೆಗಳ ಈಡೇರಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಮಾತನಾಡಿ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಮಧ್ಯಾಹ್ನ ಉಪಹಾರ ಯೋಜನೆ, ಶಾಲಾ ಶಿಕ್ಷಣ ಇಲಾಖೆ, ತಾಪಂ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿ ವರ್ಷವೂ ಕ್ಷೇತ್ರದ ಶಾಸಕರ ಮಾರ್ಗದರ್ಶನದಲ್ಲಿ ಮುಖ್ಯ ಮತ್ತು ಸಹಾಯಕ ಅಡುಗೆ ತಯಾರಿಕರಿಗೆ ಒಂದು ದಿನದ ತರಬೇತಿ ನೀಡಿ ಅವರು ನಿರ್ವಹಿಸುವ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಎಐಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ವೈ.ಶಿವರುದ್ರಪ್ಪ ಮಾತನಾಡಿ, ಪ್ರತಿನಿತ್ಯ ಮುಗ್ದ ಮಕ್ಕಳ ಹಸಿವನ್ನು ನೀಗಿಸುವ ಕಾರ್ಯವನ್ನು ಉತ್ತಮವಾಗಿ ಅಡುಗೆ ತಯಾರಿಸಿ ನೀಡುವ ಬಿಸಿಯೂಟ ತಯಾರಿಕೆ ಸಮಸ್ಯೆಗಳ ನಿವಾರಣೆಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲವೆಂದರು.
ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.