ಕನ್ನಡಪ್ರಭ ವಾರ್ತೆ ಕವಿತಾಳ
131 ವಿದ್ಯಾರ್ಥಿಗಳಲ್ಲಿ 65 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 66 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಕನ್ನಡ ಭಾಷೆಯಲ್ಲಿ 44, ಇಂಗ್ಲೀಷ್, 54, ಹಿಂದಿ, 58, ಗಣಿತ 56, ವಿಜ್ಞಾನ 65 ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 66 ಮಕ್ಕಳು ಅನುತ್ತೀರ್ಣರಾಗಿದ್ದು ಆರೂ ವಿಷಯಗಳಲ್ಲಿ ಅನುತ್ತೀರ್ಣರಾದವರ ಸಂಖ್ಯೆ 25 ಈ ಕಳಪೆ ಫಲಿತಾಂಶ ಶಿಕ್ಷಕರಲ್ಲಿ ಅಚ್ಚರಿ ಮೂಡಿಸಿದೆ ಆದರೆ ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
2021-22 ರಲ್ಲಿ 201 ಮಕ್ಕಳಲ್ಲಿ 165 ಮಕ್ಕಳು ಉತ್ತೀರ್ಣರಾಗಿದ್ದರು, ಶೇ.82.82 ಫಲಿತಾಂಶ ದಕ್ಕಿತ್ತು, 2022-23 ರಲ್ಲಿ 132 ಮಕ್ಕಳಲ್ಲಿ 122 ಮಕ್ಕಳು ಉತ್ತೀರ್ಣರಾಗಿದ್ದರು ಶೇ.81.82 ಫಲಿತಾಂಶ ಸಿಕ್ಕಿತ್ತು. ಪ್ರಸ್ತುತ ವರ್ಷ 131 ಮಕ್ಕಳಲ್ಲಿ ಕೇವಲ 65 ಮಕ್ಕಳು ಉತ್ತೀರ್ಣರಾಗಿ ಶೇ.49 ಫಲಿತಾಂಶ ಲಭ್ಯವಾಗಿದೆ.ಈ ವರ್ಷ 8, 9 ಮತ್ತು 10ನೇ ತರಗತಿಯಲ್ಲಿ ಒಟ್ಟು 493 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಗ್ರಾಮೀಣ ಕೃಪಾಂಕ ತೆಗೆದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದೆ. ಈ ವರ್ಷ ಫಲಿತಾಂಶ ಕುಸಿದ ಪರಿಣಾಮ ಆತಂಕ ಹೆಚ್ಚಿದೆ.
ಆಂತರಿಕ 20 ಅಂಕ ನೀಡಿದರೂ ಹೆಚ್ಚಿನ ಸಂಖ್ಯೆಯ ಮಕ್ಕಳು ಅನುತ್ತೀರ್ಣರಾಗಿರುವುದು ಕಂಡು ಬಂದಿದೆ. ಶಾಲೆಗೆ ಬರುವ ಮಕ್ಕಳು ಹಾಜರಾತಿ ನಂತರ ತರಗತಿಗಳಿಗೆ ಗೈರಾಗುವುದು, ಓದಿನ ಬಗ್ಗೆ ಆಸಕ್ತಿ ತೋರದಿರುವುದು, ಗುಟುಕಾ, ಸಿಗರೇಟು ಮತ್ತಿತರ ದುಶ್ಚಟಗಳ ಬಗ್ಗೆ ಒಲವು, ಮೊಬೈಲ್ ಬಳಕೆ ಬಗ್ಗೆ ಹೆಚ್ಚಿನ ಆಸಕ್ತಿ ಹೀಗೆ ಓದಿನ ಕಡೆ ಮಕ್ಕಳು ತೋರಿದ ನಿರ್ಲಕ್ಷವೇ ಈ ಫಲಿತಾಂಶವಾಗಿದೆ.
ತರಗತಿ ಹೊರತುಪಡಿಸಿ ವಿಶೇಷ ತರಗತಿ ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ತರಗತಿ ನಡೆಸಲಾಗಿದೆ. ಆದಾಗೂ ಫಲಿತಾಂಶ ಸುಧಾರಣೆ ಕಂಡು ಬಂದಿಲ್ಲ, ಪರೀಕ್ಷಾ ಅಕ್ರಮ ತಡೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿರುವುದು ಫಲಿತಾಂಶ ಕುಸಿತಕ್ಕೆ ಕಾರಣ ಇರಬಹುದು ಎಂದು ಮುಖ್ಯ ಗುರು ಶಿವನಗೌಡ ಬಿರಾದಾರ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಮೌನೇಶ ಕೊಡ್ಲಿ ಹೇಳಿದರು.