ಕವಿವಿ ಅಥ್ಲೆಟಿಕ್‌ ಕ್ರೀಡಾಕೂಟ: ಮೊದಲ ದಿನವೇ ದಾಖಲೆ

KannadaprabhaNewsNetwork |  
Published : Dec 13, 2024, 12:45 AM IST
ಕರ್ನಾಟಕ ವಿವಿಯ ಅಂತರ್‌ ಕಾಲೇಜು ಅಥ್ಲೆಟಿಕ್ಸ್‌ನಲ್ಲಿ ನೂತನ ದಾಖಲೆ ಬರೆದ ಕ್ರೀಡಾಪಟುಗಳು. | Kannada Prabha

ಸಾರಾಂಶ

ಧಾರವಾಡದ ಜೆಎಸ್ಸೆಸ್‌ನ ಅಂಬಿಕಾ ವಿ. ಶಾಟ್‌ಪುಟ್ ವಿಭಾಗದಲ್ಲಿ, ಪುರುಷರ ವಿಭಾಗದ ಶಾಟ್‌ಪುಟ್‌ಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರಜ್ವಲ್ ಎಂ. ಶೆಟ್ಟಿ, ಮಹಿಳಾ ವಿಭಾಗದಲ್ಲಿ ಹೈಜಂಪ್‌ನಲ್ಲಿ ಹೊನ್ನಾವರದ ಎಂಪಿಇಎಸ್‌ಡಿಎಂ ಪದವಿ ಕಾಲೇಜಿನ ನಿಖಿತಾ ಪುರುಷೋತ್ತಮ ಗೌಡ, ಗದಗಿನ ಪ್ರಭು ರಾಜೇಂದ್ರ ಕ್ರೀಡಾ ಪದವಿ ಕಾಲೇಜಿನ ಮೇಘಾ ಮುನವಳ್ಳಿಮಠ ಮಹಿಳಾ ವಿಭಾಗದ 400 ಮೀಟರ್ ಹರ್ಡಲ್ಸ್ ಓಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಧಾರವಾಡ:

ಇಲ್ಲಿಯ ಆರ್.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಜೆಎಸ್ಸೆಸ್‌ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯ 71ನೇ ಅಂತರ್ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟದ ಮೊದಲ ದಿನ ಗುರುವಾರ ನಾಲ್ಕು ಹೊಸ ಕ್ರೀಡಾ ದಾಖಲೆಗಳು ದಾಖಲಾದವು.

ಜೆಎಸ್ಸೆಸ್‌ನ ಅಂಬಿಕಾ ವಿ., ಶಾಟ್‌ಪುಟ್ ವಿಭಾಗದಲ್ಲಿ 14.64 ಮೀಟರ್ ಗುಂಡು ಎಸೆಯುವ ಮೂಲಕ ಹಿಂದಿನ 12.89 ಮೀ ದಾಖಲೆ ಮುರಿದರು. ಪುರುಷರ ವಿಭಾಗದ ಶಾಟ್‌ಪುಟ್‌ಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರಜ್ವಲ್ ಎಂ. ಶೆಟ್ಟಿ 15.04 ಮೀಟರ್ ಗುಂಡು ಎಸೆದು ಹಿಂದಿನ 14.36 ಮೀ ದಾಖಲೆ ಮುರಿದರು. ಮಹಿಳಾ ವಿಭಾಗದಲ್ಲಿ ಹೈಜಂಪ್‌ನಲ್ಲಿ ಹೊನ್ನಾವರದ ಎಂಪಿಇಎಸ್‌ಡಿಎಂ ಪದವಿ ಕಾಲೇಜಿನ ನಿಖಿತಾ ಪುರುಷೋತ್ತಮ ಗೌಡ 1.56 ಮೀಟರ್ ಎತ್ತರ ಜಿಗಿಯ ಮೂಲಕ ಹಿಂದಿನ 1.51 ಮೀ ದಾಖಲೆ ಮೀರಿದರು. ಗದಗಿನ ಪ್ರಭು ರಾಜೇಂದ್ರ ಕ್ರೀಡಾ ಪದವಿ ಕಾಲೇಜಿನ ಮೇಘಾ ಮುನವಳ್ಳಿಮಠ ಮಹಿಳಾ ವಿಭಾಗದ 400 ಮೀಟರ್ ಹರ್ಡಲ್ಸ್ ಓಟದಲ್ಲಿ 1:00.08 ನಿಮಿಷದಲ್ಲಿ ಗುರಿ ತಲುಪಿ ಹಳೆಯ 1:03.72 ನಿಮಿಷದ ದಾಖಲೆ ಮುರಿದರು. ಈ ಎಲ್ಲ ಕ್ರೀಡಾಪಟುಗಳು ನೂತನ ಕ್ರೀಡಾ ದಾಖಲೆ ಬರೆಯುವ ಮೂಲಕ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದರು.

ಪದಕ ಹಾಗೂ ಅಂಕಗಳ ವಿವರ

ಜೆಎಸ್‌ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಪುರುಷರ ವಿಭಾಗದಲ್ಲಿ 3 ಬಂಗಾರ, 3 ಬೆಳ್ಳಿ, 2 ಕಂಚಿನ ಪದಕ ಸೇರಿ ಒಟ್ಟು ಎಂಟು ಪದಕ ಪಡೆದರು. ಮಹಿಳೆಯರ ವಿಭಾಗದಲ್ಲಿ 4 ಬಂಗಾರ, 2 ಬೆಳ್ಳಿ, 1 ಕಂಚಿನ ಪದಕ ಸೇರಿ ಒಟ್ಟು 7 ಪದಕ ಪಡೆದು 56 ಅಂಕಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಕರ್ನಾಟಕ ಕಾಲೇಜು ಪುರುಷರ ವಿಭಾಗದಲ್ಲಿ 4 ಪದಕ, ಮಹಿಳೆಯರ ವಿಭಾಗದಲ್ಲಿ 3 ಪದಕ ಪಡೆದು 28 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಹೊನ್ನಾವರದ ಎಂಪಿಇಎಸ್‌ ಎಸ್‌ಡಿಎಂ ಪದವಿ ಕಾಲೇಜು ಪುರುಷರ ವಿಭಾಗದಲ್ಲಿ 2 ಪದಕ, ಮಹಿಳೆಯರ ವಿಭಾಗದಲ್ಲಿ ಒಂದು ಪದಕ ಪಡೆದು ತೃತೀಯ ಸ್ಥಾನದಲ್ಲಿದೆ.

ಕರ್ನಾಟಕ ಕಲಾ ಕಾಲೇಜಿನ ಪ್ರಸನ್ನಕುಮಾರ ಮಣ್ಣೂರ 100 ಮೀಟರ್‌ ಓಟದಲ್ಲಿ ಪ್ರಥಮ, ಜೆಎಸ್‌ಎಸ್ ಯಶಸ್ಸ್ ಡಿ. ದ್ವಿತೀಯ, ಎಂಪಿಇ ಎಸ್‌ಡಿಎಂ ಕಾಲೇಜಿನ ಚಿನ್ಮಯ ಮರಾಠಿ ತೃತೀಯ ಸ್ಥಾನ ಪಡೆದಿದ್ದಾರೆ.

10 ಸಾವಿರ ಮೀಟರ್ ಓಟದಲ್ಲಿ ಕರ್ನಾಟಕ ಕಾಲೇಜಿನ ಮಡಿವಾಳಪ್ಪ, ಜೆಎಸ್ಸೆಸ್‌ನ ಪರಸಪ್ಪ ಹಸರೆ, ಅಂಜುಮನ್ ಕಾಲೇಜಿನ ದಾದಾ. ಕೆ. ಜಮಖಂಡಿ ಮೊದಲ ಮೂರು ಸ್ಥಾನ ಪಡೆದರು. ಪುರುಷರ 400 ಮೀಟರ್‌ ಹರ್ಡಲ್ಸ್‌ನಲ್ಲಿ ಜೆಎಸ್‌ಎಸ್ ಸಂಸ್ಥೆಯ ಲೋಗೇಶ, ಕರ್ನಾಟಕ ಕಾಲೇಜಿನ ಚೇತನ ಪಾಟೀಲ್ ಹಾಗೂ ಅಂಕೋಲಾದ ಸರ್ಕಾರಿ ಪದವಿ ಕಾಲೇಜಿನ ಅನೀಶ ನಾಯಕ್ ಮೊದಲ ಮೂರು ಸ್ಥಾನ ಪಡೆದರು. ಪುರುಷರ 800 ಮೀಟರ್ ಓಟದ ವಿಭಾಗದಲ್ಲಿ ಜೆಎಸ್‌ಎಸ್ ಸಂಗಮೇಶ ಮಾಳಿ ಪ್ರಥಮ, ಕರ್ನಾಟಕ ಕಾಲೇಜಿನ ಪಿ. ಪ್ರಕಾಶ ಬಾಬು ದ್ವಿತೀಯ, ಜೆಎಸ್‌ಎಸ್ ಶಿವಪುತ್ರ ಪೂಜಾರಿ ತೃತೀಯ ಸ್ಥಾನ ಪಡೆದರು.

ಪುರುಷರ ಹೈಜಂಪ್ ವಿಭಾಗದಲ್ಲಿ ಜೆಎಸ್‌ಎಸ್‌ನ ಸೃಜನ ಜನಾರ್ಧನ್ ಪ್ರಥಮ, ಹುಬ್ಬಳ್ಳಿ ಕೆಎಲ್‌ಇ ಬಿಬಿಎ ಕಾಲೇಜಿನ ನಿಹಾಲ ಯು ಶೆಟ್ಟಿ ದ್ವಿತೀಯ, ಹೊನ್ನಾವರದ ಅರುಣ ನಾಯಕ್ ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗ:

ಮಹಿಳಾ ವಿಭಾಗದಲ್ಲಿ 100 ಮೀಟರ್‌ ಓಟದಲ್ಲಿ ಜೆಎಸ್ಸೆಸ್‌ನ ಪ್ರೀನ್ಸಿತಾ ಸಿದ್ಧಿ ಪ್ರಥಮ, ಶಿರಸಿಯ ಎಂಇಎಸ್ ಕಾಲೇಜಿನ ರೇಷ್ಮಾ ಪವಾಡ ದ್ವಿತೀಯ, ಜೆ.ಎಸ್.ಎಸ್ ಸುಕನ್ಯಾ ಪತ್ರಿಮಠ್ ತೃತೀಯ ಸ್ಥಾನ. ಮಹಿಳೆಯರ 10 ಸಾವಿರ ಓಟದಲ್ಲಿ ಜೆ.ಎಸ್.ಎಸ್ ಸುಶ್ಮಿತಾ ಮುಗಳ್ಳಿ ಪ್ರಥಮ, ಕರ್ನಾಟಕ ಕಾಲೇಜಿನ ಸೌಜನ್ಯ ಪೂಜಾರಿ ದ್ವಿತೀಯ, ಹುಬ್ಬಳ್ಳಿಯ ಕೆಎಲ್ಇ ಎಸ್.ಕೆ. ಆರ್ಟ್ಸ್ ಕಾಲೇಜಿನ ಕಾವ್ಯಶ್ರೀ ಸುರಪುರ ತೃತೀಯ ಸ್ಥಾನ. ಮಹಿಳೆಯರ 400 ಮೀಟರ್ ಹರ್ಡಲ್ಸ್ ಓಟದಲ್ಲಿ ಗದಗಿನ ಪ್ರಭು ರಾಜೇಂದ್ರ ಕ್ರೀಡಾ ಪದವಿ ಕಾಲೇಜಿನ ಮೇಘಾ ಮುನವಳ್ಳಿಮಠ ನೂತನ ಕ್ರೀಡಾ ದಾಖಲೆ ಬರೆದರು. ಮಣಕಿಯ ಸರ್ಕಾರಿ ಪದವಿ ಕಾಲೇಜಿನ ಸುಜನಾ ಅರುಣ ನಾಯಕ್ ದ್ವಿತೀಯ, ಭಟ್ಕಳದ ಸರ್ಕಾರಿ ಪದವಿ ಕಾಲೇಜಿನ ಅನನ್ಯಾ ನಾಯಕ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.ಇಂದು ಕ್ರೀಡಾಕೂಟದ ಉದ್ಘಾಟನೆ

ಶುಕ್ರವಾರ ಮಧ್ಯಾಹ್ನ 3.30ಕ್ಕೆ ಅಂತಾರಾಷ್ಟ್ರೀಯ ಕುಸ್ತಿಪಟು, ಓಲಂಪಿಯನ್ ಅಂತಿಮ್ ಪಂಗಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕವಿವಿ ಪ್ರಭಾರ ಕುಲಪತಿ ಡಾ. ಬಿ.ಎಂ. ಪಾಟೀಲ ಧ್ವಜಾರೋಹಣ ನೆರವೇರಿಸಲಿದ್ದು, ಶಾಸಕ ಎಸ್.ವಿ. ಸಂಕನೂರ ಕ್ರೀಡಾಕೂಟದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು. ಅದೇ ರೀತಿ ಡಿ. 14ರ ಸಂಜೆ 4.30ಕ್ಕೆ ಅಂತಾರಾಷ್ಟ್ರೀಯ ಕುಸ್ತಿಪಟು ಎಂ.ಆರ್. ಪಾಟೀಲ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೆಎಂಎಫ್ ನಿರ್ದೇಶಕಿ ಶಿವಲೀಲಾ ಕುಲಕರ್ಣಿ, ಕವಿವಿ ಪ್ರಭಾರ ಕುಲಪತಿ ಡಾ. ಬಿ.ಎಂ.ಪಾಟೀಲ ಅತಿಥಿಗಳಾಗಿ ಆಗಮಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!