
ಮಂಗಳೂರು: ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ 5ನೇ ಬೋಳೂರು ಶಾಖೆಯ ನೂತನ ಸ್ವಂತ ಕಚೇರಿ ಕಟ್ಟಡ ಮತ್ತು ಮುಖ್ಯ ಸಭಾಭವನದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್ . ರಾಜೇಂದ್ರ ಕುಮಾರ್ ಭಾನುವಾರ ನಗರದ ಸುಲ್ತಾನ್ ಬತ್ತೇರಿ ರಸ್ತೆಯ ಬೋಳೂರಿನಲ್ಲಿ ನೆರವೇರಿಸಿದರು.ಈ ವೇಳೆ ಮಾತನಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕೃಷಿ ಸಾಲ ಮತ್ತು ಸಾಲ ಮರು ಪಾವತಿಯ ವಿಚಾರದಲ್ಲಿ ದೇಶದಲ್ಲಿಯೇ ಅವಿಭಜಿತ ಕರಾವಳಿ ಜಿಲ್ಲೆ ಅಗ್ರಸ್ಥಾನದಲ್ಲಿದ್ದು, ಸಾಲ ಸಿಗದೇ ರೈತರು ಸಂಕಷ್ಟಪಡುವ ಸ್ಥಿತಿ ಇಲ್ಲ ಎಂದರು.ಕಳೆದ 29 ವರ್ಷಗಳಲ್ಲಿ ಕೃಷಿ ಸಾಲ ಶೇ.100ರಷ್ಟು ಮರು ಪಾವತಿ ಮಾಡುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಈ ಬಗ್ಗೆ ನಬಾರ್ಡ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು ನಬಾರ್ಡ್ ಕೂಡ ಮುಂದಾಗಿದೆ ಎಂದರು.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವಾಣಿಜ್ಯ ಬ್ಯಾಂಕ್‌ಗಳ ತವರೂರು. ಆದರೆ ಈಗ ಬಹುತೇಕ ಬ್ಯಾಂಕ್‌ಗಳು ವಿಲೀನಗೊಂಡಿದೆ. ವಾಣಿಜ್ಯ ಬ್ಯಾಂಕಿಂಗ್ ಸಿರಿವಂತರಿಗೆ ಮಾತ್ರ ಸಾಲ ನೀಡುತ್ತವೆ. ಆದರೆ ಸಹಕಾರಿ ಬ್ಯಾಂಕ್‌ಗಳು ಊರಿನ ಪ್ರತಿಯೊಬ್ಬರಿಗೂ ಸುಲಭದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಪ್ರತೀ ಮನೆಗೂ ಬೆಳಕಾಗಿದೆ. ಮಹಿಳೆಯರಿಗೆ ಸಹಕಾರ ಕ್ಷೇತ್ರದ ಮೂಲಕ ಸ್ವಾವಲಂಬಿ ಬದುಕು ನಿರ್ಮಾಣ ಸಾಧ್ಯವಾಗಿದೆ ಎಂದರು.ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇಲ್ಲ. ನಾನು ಕೂಡ ರಾಜಕೀಯಕ್ಕೆ ಬರೋದಿಲ್ಲ. ಈ ವಿಚಾರದಲ್ಲಿ ನಾನು ಯಾವುದೇ ಒತ್ತಡಕ್ಕೂ ಬಗ್ಗುವುದಿಲ್ಲ. ರಾಜಕೀಯ ರಹಿತವಾಗಿ ಸಹಕಾರಿ ಕ್ಷೇತ್ರ ಅವಿಭಜಿತ ಜಿಲ್ಲೆಯಲ್ಲಿ ಪ್ರಗತಿಯನ್ನು ಕಾಣುತ್ತಿದೆ ಎಂದು ಡಾ.ಎಂ.ಎನ್. ಆರ್. ಹೇಳಿದರು.
ಇದೇ ಸಂದರ್ಭ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಮುಗ್ರೋಡಿ ಕನ್‌ಸ್ಟ್ರಕ್ಷನ್ ಮಾಲೀಕ ಸುಧಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಬೋಳೂರು ಜಾರಂದಾಯ ದೈವಸ್ಥಾನದ ಅಧ್ಯಕ್ಷ ಬಲರಾಜ ಸಿ.ಕೋಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು. ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಭಾಸ್ಕರ ಕೊಂಡೆ, ತುಕಾರಾಂ ಸನಿಲ್, ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಧನಂಜಯ ಬಂಗೇರ, ನಿರ್ದೇಶಕರಾದ ಪ್ರೇಮ, ನೇಮಿರಾಜ್ ಶೆಟ್ಟಿ, ಶ್ರೀರಂಜಿನಿ, ಸಿತೇಶ್ ಕೊಂಡೆ, ಗಣೇಶ್ ಶೆಟ್ಟಿ, ಶರ್ಮಿಳಾ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ (ಪ್ರಭಾರ) ಪ್ರೀತಮ್ ಪಿ.ಪೂಜಾರಿ ಇದ್ದರು.ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎ.ಲೋಕೇಶ್ ಭಂಡಾರಿ ಸ್ವಾಗತಿಸಿದರು. ನಿರ್ದೇಶಕ ಸುಮಂತ್ ರಾವ್ ವಂದಿಸಿದರು. ರೋಹಿತ್ ಉಳ್ಳಾಲ್ ನಿರೂಪಿಸಿದರು.ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅತ್ಯುತ್ತಮ ಸೇವೆಯೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದೆ. 5. 42 ಕೋ. ರು. ವೆಚ್ಚದಲ್ಲಿ ಹೊಸ ಕಟ್ಟಡ ಹಾಗೂ ಸಭಾಭವನದ ನಿರ್ಮಾಣ ಮಾಡಲಾಗಿದೆ. ಶೇ.18ರಷ್ಟು ಡಿವಿಡೆಂಟ್ ನೀಡಿದೆ. ಬ್ಯಾಂಕ್ ಸಾಕಷ್ಟು ಪ್ರಗತಿಯನ್ನು ಹೊಂದುತ್ತಿದ್ದು, ಉತ್ತಮ ಲಾಭವನ್ನು ಪಡೆಯುತ್ತಿದೆ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಶ್ಲಾಘಿಸಿದರು.