ಕಾಯಕ ಬಂಧುಗಳು ಸಂಪರ್ಕ ಸೇತುವೆಯಾಗಬೇಕು: ಕೆ.ಎಂ.ಗಾಯತ್ರಿ

KannadaprabhaNewsNetwork |  
Published : Dec 08, 2024, 01:15 AM IST
11 | Kannada Prabha

ಸಾರಾಂಶ

ಮಹಾತ್ಮಗಾಂಧಿ ಉದ್ಯೋಗ ಖಾತರಿ ಕಾಯ್ದೆಯು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದರಜೊತೆಗೆ, ಸಮುದಾಯ ಆಸ್ತಿಗಳನ್ನೂ ಸೃಜಿಸುವುದು ಸರ್ಕಾರದ ಬಹುದೊಡ್ಡ ಕಾರ್ಯಕ್ರಮವಾಗಿದೆ. ಕೂಲಿಕಾರರನ್ನು ಪ್ರೋತ್ಸಾಹಿಸಿ ಸಂಘಟಿಸುವ ಕಾಯಕ ಬಂಧುಗಳಿಗೆ ತರಬೇತಿ ನೀಡಲು ಮಾಸ್ಟರ್ ತರಬೇತುದಾರರಾಗಿ ತರಬೇತಿ ಪಡೆದುಕೊಂಡಿರುವುದು ಒಳ್ಳೆಯ ಸಂಗತಿ.

ಕನ್ನಡಪ್ರಭ ವಾರ್ತೆ ಮೈಸೂರು

ಗ್ರಾಮ ಪಂಚಾಯ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಠಾನದ ಪ್ರಥಮ ಹಂತದಲ್ಲಿ ಕೂಲಿಕಾರರನ್ನು ಸಂಘಟಿಸಿ ಕೂಲಿ ಕೆಲಸಕ್ಕೆ ಕರೆತರುವ ಕಾಯಕ ಬಂಧುಗಳ ಪಾತ್ರ ಬಹುಮುಖ್ಯವಾದದ್ದು. ಇವರು ಸಮುದಾಯ ಹಾಗೂ ಗ್ರಾಮ ಪಂಚಾಯ್ತಿಗೆ ಸಂಪರ್ಕ ಸೇತುವೆಯಾಗಿದ್ದಾರೆ ಎಂದು ಜಿಪಂ ಸಿಇಒ ಕೆ.ಎಂ.ಗಾಯತ್ರಿ ತಿಳಿಸಿದರು.

ನಗರದ ಬನ್ನಿ ಮಂಟಪದಲ್ಲಿರುವ ಒಡಿಪಿ ಸಂಸ್ಥೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆ ಹಾಗೂ ಗ್ರಾಮ ಸ್ವರಾಜ್ ಅಭಿಯಾನ- ಕರ್ನಾಟಕ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ವಿಭಾಗ ಮಟ್ಟದ ಕಾಯಕ ಬಂಧುಗಳ ತರಬೇತುದಾರರ 10 ದಿನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಾತ್ಮಗಾಂಧಿ ಉದ್ಯೋಗ ಖಾತರಿ ಕಾಯ್ದೆಯು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದರಜೊತೆಗೆ, ಸಮುದಾಯ ಆಸ್ತಿಗಳನ್ನೂ ಸೃಜಿಸುವುದು ಸರ್ಕಾರದ ಬಹುದೊಡ್ಡ ಕಾರ್ಯಕ್ರಮವಾಗಿದೆ. ಕೂಲಿಕಾರರನ್ನು ಪ್ರೋತ್ಸಾಹಿಸಿ ಸಂಘಟಿಸುವ ಕಾಯಕ ಬಂಧುಗಳಿಗೆ ತರಬೇತಿ ನೀಡಲು ಮಾಸ್ಟರ್ ತರಬೇತುದಾರರಾಗಿ ತರಬೇತಿ ಪಡೆದುಕೊಂಡಿರುವುದು ಒಳ್ಳೆಯ ಸಂಗತಿ. ಸುದೀರ್ಘ 10 ದಿನಗಳ ತರಬೇತಿಯಲ್ಲಿ ಸಾಕಷ್ಟು ಅನುಭವ ಪಡೆದುಕೊಂಡಿರುವ ನೀವು, ತಾಲೂಕು ಹಂತದಲ್ಲಿ ಕಾಯಕ ಬಂಧುಗಳನ್ನು ಪರಿಣಾಮಕಾರಿಯಾಗಿ ತಯಾರು ಮಾಡುವಂತೆ ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು ಮಾತನಾಡಿ, ಒಂದು ಮಗು ಗರ್ಭದಲ್ಲಿ ಇರುವಾಗಿನಿಂದ ಸ್ಮಶಾನದವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿವೆ. 2005ರಲ್ಲಿ ಉದ್ಯೊಗ ಖಾತರಿ ಕಾಯ್ದೆ ಪ್ರಾರಂಭವಾದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಸಮರ್ಪಕ ರಸ್ತೆ, ಚರಂಡಿಗಳು ಇರಲಿಲ್ಲ. ನಂತರದ 3- 4 ವರ್ಷಗಳಲ್ಲಿ ಯೋಜನೆ ಮೂಲಕ ಎಲ್ಲಾ ಗ್ರಾಮದಲ್ಲೂ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿದೆ ಎಂದರು.

ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿ ಉತ್ತಮ ಕೂಲಿ ನೀಡಲಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಕೂಲಿಕಾರರನ್ನು ಸಂಘಟಿಸಲು ಕಾಯಕಬಂಧುಗಳ ಅವಶ್ಯಕತೆ ಇದೆ. ಗ್ರಾಮೀಣ ಜನರ ಜೀವನಾಧಾರಕ್ಕೆ ನೆರವಾಗಬೇಕು ಎಂದರು.

ಪ್ರತಿಭೆ ಸಂಸ್ಥೆ ನಿರ್ದೇಶಕ ಜಿ. ಪ್ರಸನ್ನಮೂರ್ತಿ, ಜನಜಾಗೃತಿ ಸಂಸ್ಥೆ ನಿರ್ದೇಶಕ ವಿ.ಎನ್. ಮೂರ್ತಿ, ಎಚ್.ಡಿ. ಕೋಟೆ ನಿಸರ್ಗ ಫೌಂಡೇಷನ್ ನಿರ್ದೇಶಕ ಪ್ರಭು, ಗುಂಡ್ಲುಪೇಟೆ ಟಾಡ್ರೋ ಸಂಸ್ಥೆ ನಿರ್ದೇಶಕ ಡಾ. ಮೋಹನ್ ಕೋಟೆಕೆರೆ, ಮಂಡ್ಯ ವಿಕಾಶನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು, ಸ್ನೇಹ ಸಂಸ್ಥೆ ನಿರ್ದೇಶಕಿ ಹೇಮಾ, ಪರಿವರ್ತನ ಸಂಸ್ಥೆ ನಿರ್ದೇಶಕ ರಾಜೇಗೌಡ, ಮಳವಳ್ಳಿ ಜನರಕ್ಷ ಸಂಸ್ಥೆ ನಿರ್ದೇಶಕ ಕೃಷ್ಣೇಗೌಡ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!