ಕಲಿಕೆಗೂ ಜೈ, ಸಾಹಿತ್ಯಕ್ಕೂ ಸೈ ಧ್ಯೇಯದಡಿ ಕಾಯಕ

KannadaprabhaNewsNetwork |  
Published : Sep 05, 2025, 01:00 AM IST
ಪೋಟೋವಿವಿಧ ತರಕಾರಿಗಳ ಮೂಲಕ ಮಕ್ಕಳಿಗೆ ರಾಷ್ಟ್ರಧ್ವಜದ ಪರಿಕಲ್ಪನೆ ಮೂಡಿಸುತ್ತಿರುವ ಶಿಕ್ಷಕಿ ದೀಪಾ.   | Kannada Prabha

ಸಾರಾಂಶ

ದೀಪಾ ಅವರು ಇಂಗ್ಲಿಷ್ ಶಿಕ್ಷಕಿಯಾದರೂ ನಾಡಿನ ಪರಂಪರೆ, ಸಂಸ್ಕೃತಿ ಬಿಂಬಿಸಿದ್ದಕ್ಕಾಗಿ ಬೆಂಗಳೂರಿನ ಶಿಕ್ಷಕರ ಸಾಹಿತ್ಯ ಪರಿಷತ್ತು ಹಾಗೂ ಸ್ವರ್ಣಭೂಮಿ ಫೌಂಡೇಷನ್ ರಾಷ್ಟ್ರೀಯ "ಶಿಕ್ಷಕ ರತ್ನ " ಹಾಗೂ "ಶತ ಶೃಂಗ " ಪ್ರಶಸ್ತಿ ನೀಡಿ ಗೌರವಿಸಿದೆ.

ಎಂ. ಪ್ರಹ್ಲಾದ್

ಕನಕಗಿರಿ:

ಬೋಧನೆಯಲ್ಲಿ ಇಂಗ್ಲಿಷ್‌ ಶಿಕ್ಷಕಿಯಾದರೂ ಕನ್ನಡದ ಬಗ್ಗೆ ಎಲ್ಲಿಲ್ಲದ ಪ್ರೀತಿ, ಕಾಳಜಿ ಇಟ್ಟುಕೊಂಡಿರುವ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಕಳೆದ ೧೫ ವರ್ಷಗಳಿಂದಲೂ ನಾಡಿನ ಸಾಹಿತ್ಯದ ಮೂಲಕ ಶ್ರೀಮಂತಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.

ಪಟ್ಟಣದ ಗೊಲಗೇರಪ್ಪ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕಿಯಾಗಿರುವ ದೀಪಾ ಅವರು ಹತ್ತಾರು ವರ್ಷಗಳಿಂದ ಕನ್ನಡ ಪ್ರೇಮ ಬೆಳೆಸಿಕೊಂಡು ಬಂದಿದ್ದಾರೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕಸಾಪ ಹಮ್ಮಿಕೊಂಡಿದ್ದ ಕವಿಗೋಷ್ಠಿಗಳಲ್ಲಿ ಭಾಗಿಯಾಗಿ ಕವನ ವಾಚಿಸಿ ಕನ್ನಡದ ಹಿರಿಮೆ ಸಾರಿದ್ದಾರೆ.

ಕೊರೋನಾ ಸಂದರ್ಭದಲ್ಲಿಯೂ ಕನ್ನಡ ಪ್ರತಿಭಾ ಪರಿಷತ್ತಿನ ಅಡಿಯಲ್ಲಿ ನಡೆದ ಆನ್‌ಲೈನ್ ಗೋಷ್ಠಿಯಲ್ಲೂ ಭಾಗಿಯಾಗಿ ನಾಡು, ನುಡಿ, ಮಕ್ಕಳ ಕುರಿತಾದ ಕವನಗಳನ್ನು ಪ್ರಚುರಪಡಿಸುತ್ತಿದ್ದರು. ದೀಪಾ ಅವರು ಇಂಗ್ಲಿಷ್ ಶಿಕ್ಷಕಿಯಾದರೂ ನಾಡಿನ ಪರಂಪರೆ, ಸಂಸ್ಕೃತಿ ಬಿಂಬಿಸಿದ್ದಕ್ಕಾಗಿ ಬೆಂಗಳೂರಿನ ಶಿಕ್ಷಕರ ಸಾಹಿತ್ಯ ಪರಿಷತ್ತು ಹಾಗೂ ಸ್ವರ್ಣಭೂಮಿ ಫೌಂಡೇಷನ್ ರಾಷ್ಟ್ರೀಯ "ಶಿಕ್ಷಕ ರತ್ನ " ಹಾಗೂ "ಶತ ಶೃಂಗ " ಪ್ರಶಸ್ತಿ ನೀಡಿ ಗೌರವಿಸಿದೆ.

ಶಾಲಾ ಅವಧಿಯಲ್ಲಿ ಮಕ್ಕಳಿಗೆ ವಿಷಯವಾರು ಕಲಿಕೆಗೆ ಆದ್ಯತೆ ನೀಡಿರುವ ಈ ಶಿಕ್ಷಕಿ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಶ್ರಮಿಸಿದ್ದಾರೆ. ಸೃಜನಶೀಲತೆಯುಳ್ಳ ಕಾರ್ಯಕ್ರಮಗಳ ಆಯೋಜನೆ, ವಿವಿಧ ಪದ್ಯಗಳಿಗೆ ನೃತ್ಯ ಸಂಯೋಜನೆ, ತರಕಾರಿಗಳ ಮೂಲಕ ರಾಷ್ಟ್ರಧ್ವಜ ಪರಿಕಲ್ಪನೆ, ಹೀಗೆ ಹತ್ತಾರು ವಿಭಿನ್ನತೆಯ ಚಟುವಟಿಕೆಗಳ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಜಿಲ್ಲಾ ಡಯಟ್ ಮುಖ್ಯಸ್ಥರ ನೇತೃತ್ವದ ತಂಡವು ಸ್ವತಃ ತರಗತಿಗೆ ಭೇಟಿ ನೀಡಿ ಪ್ರಶಂಶಿಸಿದೆ.

ಕನ್ನಡ ಸಾಹಿತ್ಯಕ್ಕೂ ಜೈ ಮತ್ತು ಮಕ್ಕಳ ಕಲಿಕೆಗೂ ಸೈ ಎನ್ನುವ ಧ್ಯೇಯವನ್ನು ರೂಢಿಸಿಕೊಂಡಿರುವ ಶಿಕ್ಷಕಿ ದೀಪಾ ಅವರಿಗೆ ಕಾವ್ಯಲೋಕ ಗಂಗಾವತಿ, ಕಾರಟಗಿಯ ತಾಲೂಕು ಕಸಾಪ ಘಟಕದಿಂದ ಯುಗಾದಿ ಸಂಭ್ರಮ, ಚಿತ್ರದುರ್ಗದ ಕರುನಾಡ ಹಣತೆ ಕವಿ ಬಳಗ, ಧಾರವಾಡದ ಉನ್ನತಿ ಫೌಂಡೇಶನ್ ಸೇರಿ ಹಲವಾರು ಸಂಸ್ಥೆಗಳು ಗೌರವಿಸಿ ಪುರಸ್ಕರಿಸಿವೆ.

ದೀಪಾ ಆಂಗ್ಲ ಭಾಷಾ ಶಿಕ್ಷಕಿಯಾದರೂ ಕನ್ನಡಕ್ಕೆ ಪ್ರಾಧ್ಯಾನ್ಯತೆ ನೀಡುತ್ತಾ ಬಂದಿದ್ದಾರೆ. ಮಕ್ಕಳ ಕಲಿಕೆಗೂ ಮುತುವರ್ಜಿಸುತ್ತಾರೆ. ಆಂಗ್ಲ ಭಾಷಾ ಹಾಗೂ ಸಮಾಲೋಚನಾ ಸಭೆಯಲ್ಲೂ ಉತ್ತಮ ತರಬೇತಿ ನೀಡಿದ್ದಾರೆ. ಇಂತಹ ಕ್ರಿಯಾತ್ಮಕ ಶಿಕ್ಷಕರನ್ನು ಪ್ರೋತ್ಸಾಹಿಸುವಂತಾಗಬೇಕು.

ಗೀತಾ, ಸಮನ್ವಯಾಧಿಕಾರಿ ಗಂಗಾವತಿಶಿಕ್ಷಕ ವೃತ್ತಿಗೆ ನ್ಯಾಯ ಒದಗಿಸುವ ಕೆಲಸ ಮಾಡುವತ್ತ ಸಾಗಿದ್ದೇನೆ. ಮಕ್ಕಳ ಭವಿಷ್ಯವನ್ನು ಸದೃಢವಾಗಿ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಕೈಜೋಡಿಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೃಷಿ ಮಾಡಬೇಕೆಂಬುವ ಮಹಾದಾಸೆ ಹೊಂದಿರುವೆ.

ದೀಪಾ ಗಡಗಿ, ಶಿಕ್ಷಕಿ

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌