ಪ್ರಥಮ ಬಾರಿಗೆ ಆಯೋಜಿಸಲಾದ ಸಹಕಾರಿ ಕಪ್ 2026 ಕ್ರಿಕೆಟ್ ಪಂದ್ಯಾವಳಿ
ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನೌಕರರ ಕ್ರೀಡಾ ಒಕ್ಕೂಟದ ಆಶ್ರಯದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಸಹಕಾರಿ ಕಪ್ 2026 ಕ್ರಿಕೆಟ್ ಪಂದ್ಯಾವಳಿ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ನಡೆಯಿತು.
ಭಟ್ಕಳ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಜಿ.ವಿ.ಎಸ್.ಎಸ್. ಕಾಯ್ಕಿಣಿ ತಂಡವು ಪ್ರಥಮ ಸ್ಥಾನ ಪಡೆದು ಸಹಕಾರಿ ಕಪ್ 2026ರರ ಚಾಂಪಿಯನ್ ಆಗಿ ಹೊರಹೊಮ್ಮಿತು. ಉತ್ತಮ ಹೋರಾಟ ನೀಡಿದ ಕೆಡಿಸಿಸಿ ಭಟ್ಕಳ ತಂಡವು ದ್ವಿತೀಯ ಸ್ಥಾನ ಗಳಿಸಿತು.ವೈಯಕ್ತಿಕ ಸಾಧನೆಗಳಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಪ್ರಶಸ್ತಿ-ಮಾರುತಿ ಗೊಂಡ (ಕೆಡಿಸಿಸಿ ಭಟ್ಕಳ), ಶ್ರೇಷ್ಠ ಬೌಲರ್ ಪ್ರಶಸ್ತಿ-ಪ್ರವೀಣ್ ನಾಯ್ಕ್ (ವಿ.ಎಸ್.ಎಸ್. ಭಟ್ಕಳ),ಪ್ಲೇಯರ್ ಆಫ್ ದ ಸೀರಿಸ್ ಪ್ರಶಸ್ತಿ-ಅಕ್ಷಯ್ ದೇವಾಡಿಗ ( ಜಿ.ವಿ.ಎಸ್.ಎಸ್. ಕಾಯ್ಕಿಣಿ) ಪಡೆದುಕೊಂಡರು.
ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಲ್ಲಿ ಸ್ನೇಹಭಾವ, ಒಗ್ಗಟ್ಟು, ಆರೋಗ್ಯಕರ ಜೀವನಶೈಲಿ ಹಾಗೂ ಕ್ರೀಡಾಸ್ಫೂರ್ತಿ ಬೆಳೆಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಸಹಕಾರದಿಂದ ಸೇವೆ– ಸ್ನೇಹದಿಂದ ಕ್ರೀಡೆ ಎಂಬ ಧ್ಯೇಯವಾಕ್ಯವನ್ನು ಸಾಕಾರಗೊಳಿಸಿದ ಈ ಕ್ರೀಡಾಕೂಟ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸಮಾರೋಪ ಸಮಾರಂಭದಲ್ಲಿ ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಗಿದ್ದು, ಸಂಘದ ಪದಾಧಿಕಾರಿಗಳು, ಆಟಗಾರರು, ಸಂಘಟಕರು, ಪ್ರಾಯೋಜಕರು ಮತ್ತು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು. ಸಹಕಾರಿ ಕಪ್ ಮುಂದಿನ ವರ್ಷಗಳಲ್ಲಿ ಇನ್ನೂ ಉತ್ತಮವಾಗಿ ನಡೆಸುತ್ತೇವೆಂದು ಸಂಘಟಕರು ತಿಳಿಸಿದರು.