ಬಜೆಟ್‌ನಲ್ಲಿ ಕೆಸಿ ವ್ಯಾಲಿ 3ನೇ ಸಂಸ್ಕರಣೆ ಘೋಷಿಸಬೇಕಿತ್ತು

KannadaprabhaNewsNetwork | Published : Feb 19, 2024 1:32 AM

ಸಾರಾಂಶ

ಕಳೆದ ೨ ವರ್ಷದಿಂದ ನಮ್ಮ ಜಿಲ್ಲೆಯಲ್ಲಿ ಕೆ.ಸಿ. ವ್ಯಾಲಿ ಯೋಜನೆಯಿಂದ ಅಂತರ್ಜಲ ಅಭಿವೃದ್ಧಿಯಾಗಿ ಕೃಷಿಯಲ್ಲಿ ಸುಧಾರಣೆ ಕಾಣಬಹುದಾಗಿರುವುದು ಸಮಾಧಾನಕರ ಸಂಗತಿಯಾಗಿದೆ. 3ನೇ ಹಂತದ ಶುದ್ಧೀಕರಣ ಅಗತ್ಯ

ಕನ್ನಡಪ್ರಭ ವಾರ್ತೆ ಕೋಲಾರ

ರೈತರ ಬೇಡಿಕೆಗಳನ್ನು ಈಡೇರಿಸಬೇಕಾಗಿರುವುದು ಕೇಂದ್ರ- ರಾಜ್ಯ ಸರ್ಕಾರಗಳ ಜವಾಬ್ದಾರಿ, ರೈತರ ಬೆಳೆಗಳಿಗೆ ನಿಗದಿತ ಹಾಗೂ ಬೆಂಬಲ ಬೆಲೆಗಳನ್ನು ನೀಡಬೇಕಾಗಿದೆ, ಕೆಲವು ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದು ರೈತರಿಗೆ ಮಾರಕವಾಗಿದೆ, ರೈತರಿಗೆ ಪ್ರಥಮ ಆದ್ಯತೆ ನೀಡಬೇಕಾಗಿರುವುದು ಆಡಳಿತ ಮತ್ತು ಸರ್ಕಾರಗಳ ಕರ್ತವ್ಯ ಎಂದು ಮಾಜಿ ಶಾಸಕ ಕೆ. ಶ್ರೀನಿವಾಸಗೌಡ ತಿಳಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಇಫ್ಕೋ ಸೇವಾ ಸಂಸ್ಥೆಯಿಂದ ಉನ್ನತ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ 9 ವಿದ್ಯಾರ್ಥಿಗಳಿಗೆ ೬ ಲಕ್ಷ ರು.ಗಳ ಶೈಕ್ಷಣಿಕ ನೆರವು ಚೆಕ್‌ಗಳನ್ನು ವಿತರಿಸಿದ ಅವರು ಸುದ್ಧಿಗಾರರೊಂದಿಗೆ ಮಾತನಾಡಿ.

ಜಿಲ್ಲೆಗೆ ವರವಾದ ಕೆಸಿ ವ್ಯಾಲಿ

ಮಳೆ ಬೆಳೆಗಳಲ್ಲದೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರವು ಮುಂದಾಗಬೇಕಾಗಿದೆ. ಕಳೆದ ೨ ವರ್ಷದಿಂದ ನಮ್ಮ ಜಿಲ್ಲೆಯಲ್ಲಿ ಕೆ.ಸಿ. ವ್ಯಾಲಿ ಯೋಜನೆಯಿಂದ ಅಂತರ್ಜಲ ಅಭಿವೃದ್ಧಿಯಾಗಿ ಕೃಷಿಯಲ್ಲಿ ಸುಧಾರಣೆ ಕಾಣಬಹುದಾಗಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದರು.

ಕೆ.ಸಿ.ವ್ಯಾಲಿ ೩ನೇ ಹಂತದ ಸಂಸ್ಕರಣೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕಾಗಿತ್ತು, ಆದರೆ ಎರಡನೇ ಹಂತದಲ್ಲಿ ೨೭೦ ಕೆರೆಗಳಿಗೆ ನೀರು ಹರಿಸುವ ಕೆಲಸ ಬಾಕಿ ಉಳಿದಿರುವುದನ್ನು ಪೂರ್ಣಗೊಳಿಸಿದ ನಂತರ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.ಚುನಾವಣಾ ಪ್ರಚಾರ ಕೈಗೊಳ್ಳುವೆ

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾನು ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ, ನನಗೂ ಕೆ.ಹೆಚ್. ಮುನಿಯಪ್ಪರಿಗೂ ಯಾವುದೇ ವೈಮನಸ್ಸುಗಳು ಇಲ್ಲ, , ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಿದರೂ ಪ್ರಚಾರಕ್ಕೆ ಹೋಗುತ್ತೇನೆ. ಹಿಂದಿನ ಲೋಕಸಭಾ ಚುನಾವಣೆಯ ಪರಿಸ್ಥಿತಿಗಳು ಬೇರೆ ರೀತಿ ಇತ್ತು ಈಗಿನದೆ ಬೇರೆಯಾಗಿದೆ, ೮ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲರ ಅಭಿಪ್ರಾಯ ಪಡೆದು ಹೊಂದಾಣಿಕೆ ಮಾಡಿಕೊಂಡು ಹೋದರೆ ಯಶಸ್ಸು ಸಾಧಿಸಬಹುದು, ಈ ಭಾಗವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು ಎಂದು ಅಭಿಪ್ರಾಯಪಟ್ಟರು.

ವಿಧಾನಪರಿಷತ್‌ ಚುನಾವಣೆ

ವಿಧಾನ ಪರಿಷತ್ ಚುನಾವಣೆಗೆ ಇನ್ನೂ ೪-೫ ತಿಂಗಳು ಇದೆ, ಸಿಎಂ ಸಿದ್ದರಾಮಯ್ಯನವರ ಮನಸ್ಸಿನಲ್ಲಿ ನನಗೆ ಕೊಟ್ಟಿರುವ ಮಾತು ಉಳಿದಿದೆ, ಕೋಲಾರಕ್ಕೆ ಬಂದಿದ್ದ ಸಂದರ್ಭದಲ್ಲಿ ನಾನು ಇಸ್ರೇಲ್‌ಗೆ ಹೋಗಿದ್ದೆ ಆಗಲೂ ನನ್ನನ್ನು ನೆನಪಿಸಿಕೊಂಡಿದ್ದಾರೆ, ಇನ್ನು ಕಾಲವಕಾಶವಿದೆ ಕಾದು ನೋಡೋಣ ಎಂದರು. ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಂ.ಸಿ. ಮಾಜಿ ಅಧ್ಯಕ್ಷ ನಾಗನಾಳ ಸೋಮಣ್ಣ ಇದ್ದರು.

Share this article