ಗುತ್ತಲಕ್ಕೆ ಕೆಸಿಸಿ ಬ್ಯಾಂಕ್‌ ಶಾಖೆ ಮಂಜೂರು: ಶಿವಕುಮಾರಗೌಡ ಪಾಟೀಲ್

KannadaprabhaNewsNetwork | Published : Jan 13, 2024 1:34 AM

ಸಾರಾಂಶ

ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದಲ್ಲಿ ಕೆಸಿಸಿ ಬ್ಯಾಂಕ್‌ ಹೊಸ ಶಾಖೆ ಆರಂಭಿಸಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ಹೇಳಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಗುತ್ತಲ: ಗುತ್ತಲ ಪಟ್ಟಣಕ್ಕೆ ಕೆಸಿಸಿ ಬ್ಯಾಂಕ್ ಶಾಖೆ ಮಂಜೂರಿಯಾಗಿದ್ದು, ಶೀಘ್ರದಲ್ಲಿಯೇ ಶಾಖೆ ಆರಂಭಿಸಲಾಗುವುದು ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ಹೇಳಿದರು.ಪಟ್ಟಣದ ಪಿಕೆಪಿಎಸ್ (ವಿಎಸ್‌ಎಸ್) ಸೊಸೈಟಿಯಲ್ಲಿ ಕೆಸಿಸಿ ಬ್ಯಾಂಕ್ ಶಾಖೆ ಆರಂಭಿಸುವ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ವಾಣಿಜ್ಯ ಬ್ಯಾಂಕ್‌ನಂತೆಯೇ ನಮ್ಮ ಕೆಸಿಸಿ ಬ್ಯಾಂಕ್‌ನಲ್ಲಿ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ. ತ್ವರಿತಗತಿಯಲ್ಲಿ ಖಾತೆ ತೆರೆಯಲಾಗುವುದು. ರೈತರಿಗೆ ಶೇ. 3 ಪ್ರತಿಶತ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದೇವೆ. ನೀರಾವರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೆಸಿಸಿ ಬ್ಯಾಂಕ್‌ನಿಂದ ಗರಿಷ್ಠ ₹15 ಲಕ್ಷ ವರೆಗೆ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.ಈ ಭಾಗದಲ್ಲಿನ ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಬ್ಬಿನ ಬಿಲ್ ಮೊತ್ತವನ್ನು ಗುತ್ತಲ ಶಾಖೆಯ ಪಡೆದುಕೊಳ್ಳುವಂತೆ ಕ್ರಮ ಕೈಗೊಂಡಿದ್ದೇವೆ. ಅಲ್ಲದೆ ಮುಂದಿನ ಮುಂಗಾರ ಹಂಗಾಮಿಗೆ ರಸಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ನೀಡಲಾಗುವುದು. ಮಾರ್ಚ್‌ ಅಂತ್ಯದ ವೇಳೆಗೆ ಮೂರುವರೆ ಸಾವಿರ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ತಲಾ ₹1 ಲಕ್ಷ ಬೆಳೆಸಾಲವನ್ನು ಏಕಕಾಲದಲ್ಲಿಯೇ ನೀಡುವ ಬಗ್ಗೆ ನಮ್ಮ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿದ್ದೇವೆ. ಅವಿಭಜಿತ ಧಾರವಾಡ ಜಿಲ್ಲೆಯ ಎಲ್ಲ 17 ತಾಲೂಕಿನ ಎಲ್ಲ ಗ್ರಾಮಗಳಲ್ಲಿನ ಎಲ್ಲ ರೈತರಿಗೆ ಕೆಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯವಂತೆ ಈಗಾಗಲೇ ನಾವು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ರೈತರ ಖಾತೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದರು.ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣೆ ಮಾತನಾಡಿ, 5-6 ವರ್ಷಗಳ ಹಿಂದೆಯೇ ಕೆಸಿಸಿ ಬ್ಯಾಂಕ್ ಆರಂಭವಾಗಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ಗುತ್ತಲ ಪಟ್ಟಣದಲ್ಲಿ ಶಾಖೆ ಆರಂಭವಾಗುತ್ತಿದೆ. ಗುತ್ತಲ ಭಾಗದ ಸುಮಾರು 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಇದರ ವ್ಯಾಪ್ತಿಗೆ ಬರಲಿದ್ದು, ಇದರೊಂದಿಗೆ ನಮ್ಮ ಕೆಸಿಸಿ ಬ್ಯಾಂಕ್‌ನಿಂದ ಸ್ವ-ಸಹಾಯ ಸಂಘಗಳ ರಚನೆ ಮಾಡಿ ಸಾಲ ಸೌಲಭ್ಯವನ್ನು ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಬ್ಯಾಂಕ್ ಸಂಪೂರ್ಣ ಗಣಕೀಕೃತವಾಗಿದ್ದು, ನೂತನ ಶಾಖೆಯನ್ನು ಪ್ರಸ್ತುತ ಗುತ್ತಲದ ಪಿಕೆಪಿಎಸ್ ಕಚೇರಿಯಲ್ಲಿ ಆರಂಭಿಸಲಾಗುವುದು. ಇದರ ಪಕ್ಕದಲ್ಲಿಯೇ ಪಿಕೆಪಿಎಸ್ ಕಚೇರಿ ಸ್ಥಳಾಂತರವಾಗುವುದು ಎಂದರು.ಮುಖ್ಯ ಕಾರ್ಯನಿರ್ವಾಹಕ ಕೆ. ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಶಿವಾನಂದ ಹೂಗಾರ ಬ್ಯಾಂಕ್ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಜಿಪಂ ಮಾಜಿ ಅಧ್ಯಕ್ಷ ಬಸವರಾಜ ಬಂಡಿವಡ್ಡರ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಕೆಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಮುತ್ತಣ್ಣ ಯಲಿಗಾರ, ಚನ್ನಪ್ಪ ಕಲಾಲ, ವಿಎಸ್‌ಎಸ್ ಮಾಜಿ ಅಧ್ಯಕ್ಷ ಅಜ್ಜಪ್ಪ ತರ್ಲಿ, ಆಶ್ರಯ ಕಮಿಟಿ ಮಾಜಿ ಅಧ್ಯಕ್ಷ ಶಹಜಾನಸಾಬ್ ಅಗಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕೆಂಚಮಲ್ಲ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಸಪ್ಪ ಕೆಂಚಮಲ್ಲ, ಅರ್ಬನ್ ಬ್ಯಾಂಕ್ ನಿರ್ದೇಶಕ ರುದ್ರಪ್ಪ ಹಾದಿಮನಿ, ಪಿಕಿಪಿಎಸ್ ನಿರ್ದೇಶಕರು, ಬ್ಯಾಂಕ್ ಹಿರಿಯ ನಿರೀಕ್ಷಕ ವಿ.ಎಸ್. ರಿತ್ತಿಗಾಣಗೇರ, ಜಿಲ್ಲಾ ಉಸ್ತುವಾರಿ ರುದ್ರಪ್ಪ ಅಂತ್ರದ, ಪಿಕೆಪಿಎಸ್ ಸಿಬ್ಬಂದಿ, ವಿವಿಧ ಗ್ರಾಮಗಳ ವಿಎಸ್‌ಎಸ್ ಸೊಸೈಟಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕರು, ಪಪಂ ಸದಸ್ಯರು, ಮಾಜಿ ಸದಸ್ಯರು ಇದ್ದರು.

Share this article