ಧಾರವಾಡ:
ಇಲ್ಲಿನ ಕರ್ನಾಟಕ ಕಾಲೇಜಿನಲ್ಲಿ 1999ರಿಂದ 2004ರ ವರೆಗೆ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳ ''''ಮಹಾ ಸಂಗಮ- ಮನೋಲ್ಲಾಸ'''' ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನೆರವೇರಿತು.ಕೆಸಿಡಿಯಲ್ಲಿ ಪಿಯುಸಿ, ಪದವಿ ಮುಗಿಸಿ ರಾಜ್ಯದ ವಿವಿದೆಡೆ ಕಡೆ ಬದುಕು ಕಟ್ಟಿಕೊಂಡ 150ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು 20 ವರ್ಷಗಳ ನಂತರ ತಾವು ಓದಿದ ಅದೇ ಕಾಲೇಜಿನಲ್ಲಿ ಸೇರಿದ್ದರು.
ಭಾನುವಾರ ಬೆಳಗಾಗುವಷ್ಟರಲ್ಲಿ ಕೆಸಿಡಿ ಮೈದಾನದಲ್ಲಿ ಸಮಾವೇಶಗೊಂಡ ಸಹಪಾಠಿಗಳು ಆನಂದದಿಂದ ನಲಿದರು. ಎರಡು ದಶಕಗಳ ನಂತರವೂ ಕಾಲೇಜಿನ ಕಟ್ಟಡದ ಗಾಂಭೀರ್ಯ ನೋಟಕ್ಕೆ ಬೆರಗಾದರು. ಗೆಳೆಯರನ್ನು ಗೆಳತಿಯರನ್ನು ಮತ್ತೆ ಕಂಡು ಭಾವುಕರಾದರು. ಹಸ್ತಲಾಘವ ಮಾಡಿ, ಅಪ್ಪಿ ಸ್ನೇಹದ ಸವಿ ಸವಿದರು. ಹಳೆಯ ದಿನಗಳ ನೆನಪಿನ ಬುತ್ತಿ ಬಿಚ್ಚಿ ಹಂಚಿಕೊಂಡರು.ತಮ್ಮದೇ ಆಟದ ಮೈದಾನದಲ್ಲಿ ನಲಿದರು. ಕಾಲೇಜಿನಲ್ಲಿ ಕಲಿತ ವಿದ್ಯಾಭ್ಯಾಸದ ಸವಿ ಮರು ನೆನೆಪಿಸಿಕೊಂಡು ನಲಿದಾಡಿ ಭುಜಕ್ಕೆ ಭುಜ ಹಚ್ಚಿ ಕುಳಿತು ಪಾಠ ಕೇಳಿದ ಡೆಸ್ಕುಗಳ ಮೇಲೆ ಮತ್ತೆ ಕುಳಿತು, ಮಕ್ಕಳಂತೆ ಸಂಭ್ರಮಿಸಿದರು.
ಕರ್ನಾಟಕ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಹಾಲಿ ಪ್ರಾಂಶುಪಾಲ ಡಾ. ಡಿ.ಬಿ. ಕರಡೋಣಿ ಅವರು ಹಳೆಯ ವಿದ್ಯಾರ್ಥಿಗಳ ಸಮಾಗಮಕ್ಕೆ ಸಾಕ್ಷಿಯಾದರು. ನೆಚ್ಚಿನ ಗುರುಗಳೊಂದಿಗೆ ನಲುಮೆಯಿಂದ ಬೆರೆತ ವಿದ್ಯಾರ್ಥಿಗಳು ಕಾಲಿಗೆರಗಿ ನಮಸ್ಕರಿಸಿದರು. ಕಾಲೇಜು ಕ್ಯಾಂಪಸ್ಸಿನ ಕಟ್ಟೆಗಳ ಮೇಲೆ ಮತ್ತೆ ಕುಳಿತು ಗುಂಪುಚಿತ್ರ ಕ್ಲಿಕ್ಕಿಸಿಕೊಂಡರು.ಬಳಿಕ ಎಕೋ ವಿಲೇಜಿನಲ್ಲಿ ನಡೆದ ಸ್ನೇಹ ಸಮ್ಮಿಲನದಲ್ಲಿ ಸೇರಿ ಮಕ್ಕಳಂತೆ ಮೋಜಿನ ಆಟಗಳಾಡಿ, ಹಾಡಿ, ನಟಿಸಿ, ಹಾಸ್ಯ ಚಟಾಕಿ ಹಾರಿಸಿ ಖುಷಿಪಟ್ಟರು.
ಕಲಿಕೆಯ ದಿನಗಳ ಕಷ್ಟ- ಸುಖಗಳನ್ನು ಸ್ಮರಿಸಿದರು. ಸರ್ಕಾರಿ ಕಾಲೇಜಿನಲ್ಲಿ ಕಲಿತ ತಹಶಿಲ್ದಾರರು, ಗೆಜೆಟೆಡ್ ಅಧಿಕಾರಿಗಳು, ಪೊಲೀಸ್ ಇಲಾಖೆ, ಉಪನ್ಯಾಸಕರು, ಪ್ರಾಧ್ಯಾಪಕರು, ಶಿಕ್ಷಕರು, ವಕೀಲರು, ಪತ್ರಕರ್ತರು, ಬ್ಯಾಂಕ್ ಅಧಿಕಾರಿಗಳು, ಸಹಕಾರ ಇಲಾಖೆ, ಆಹಾರ ಇಲಾಖೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಹುದ್ದೆಯ ಅನುಭವ ಹಂಚಿಕೊಂಡರು. ರಾಜಕಾರಣಿಗಳಾಗಿ, ಉದ್ಯಮಿಗಳಾಗಿ, ಸ್ವಯಂ ಉದ್ಯೋಗಿಗಳಾಗಿ, ಸ್ವಯಂ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ಸಾಮಾಜಿಕ ಸೇವಾಕಾರ್ಯಗಳಲ್ಲಿ ಅರ್ಪಿಸಿಕೊಂಡವರು. ಪರಿಚಯ-ಸಾಧನೆ ಮೆಲುಕು ಹಾಕಿದರು. ಸೈನಿಕರಾಗಿ ದೇಶ ಸೇವೆಗೈದವರು, ಕೃಷಿಯಲ್ಲೇ ಪ್ರಗತಿಪರ ಹೆಜ್ಜೆ ಇಟ್ಟವರು, ಗೃಹಿಣಿಯರು ಆಕರ್ಷಣೆಯ ಕೇಂದ್ರವಾದರು.ಸಿನಿಮಾ- ನಾಟಕ ಕಲಾವಿದರು ಸಾಹಿತಿಗಳು, ಗಾಯಕರಾಗಿ ಮಿಂಚಿದವರೆಲ್ಲ ಮತ್ತೆ ತಮ್ಮ ಪ್ರತಿಭೆ ಪ್ರದರ್ಶಿಸಿ, ಇಡೀ ದಿನ ಸಂಭ್ರಮಿಸಿದರು.