ಕನ್ನಡಪ್ರಭ ವಾರ್ತೆ ಹನೂರು
ಹನೂರು ಪಟ್ಟಣದಲ್ಲಿ ನಡೆಯುತ್ತಿರುವ ಕೆಸಿಎಫ್ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಪಟ್ಟಣದ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಗೆ ಅಧಿಕಾರಿಗಳ ಜೊತೆಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಸ್ತೆ ಕಾಮಗಾರಿಯು ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿರುವುದರಿಂದ ಮಳೆ ಬಂದು ಬಸ್ ನಿಲ್ದಾಣದಲ್ಲಿ ಚರಂಡಿ ನೀರು, ಮಳೆ ನೀರು ನಿಂತು ಕೆಸರುಮಯವಾಗಿ ಪ್ರಯಾಣಿಕರಿಗೆ ಅಂಗಡಿ ಮಾಲೀಕರಿಗೆ ಓಡಾಡಲು ಸಮಸ್ಯೆ, ದುರ್ವಾಸನೆ ಉಂಟಾಗಿದ್ದು ಅಂಗಡಿ ಮಾಲೀಕರು ರಸ್ತೆ ಕಾಮಗಾರಿ ಅಧಿಕಾರಿಗಳಿಗೆ ಸಹಕಾರ ನೀಡುವುದರ ಮೂಲಕ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಸಹಕಾರ ನೀಡುವಂತೆ ತಿಳಿಸಿದರು.ಕಾಮಗಾರಿ ಪೂರ್ಣಗೊಳಿಸಿ:ಮುಖ್ಯರಸ್ತೆಯಲ್ಲಿ ಇನ್ನೂ ಕೆಲವು ಅಂಗಡಿ ಮಾಲೀಕರ ಕಟ್ಟಡಗಳನ್ನು ತೆರವುಗೊಳಿಸದೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು, ಮಾಲೀಕರಿಗೆ ನೀಡಬೇಕಾಗಿರುವ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಿ. ಜೊತೆಗೆ ಉಳಿದಿರುವ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ ನಾಗರಿಕರಿಗೆ ಓಡಾಡಲು ಅನುಕೂಲ ಕಲ್ಪಿಸುವಂತೆ ಕೆಸಿಎಫ್ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಅಭಿವೃದ್ಧಿಗೆ ಸಹಕರಿಸಿ:
ಬಹು ನಿರೀಕ್ಷಿತ ಚತುಷ್ಪಥ ರಸ್ತೆ ಇದಾಗಿದ್ದು ಮಲೆ ಮಾದೇಶ್ವರ ಬೆಟ್ಟ ನೆರೆಯ ತಮಿಳುನಾಡು ಹಾಗೂ ವಿವಿಧ ಗ್ರಾಮಗಳಿಗೆ ತೆರಳುವ ಮುಖ್ಯ ರಸ್ತೆ ಇದಾಗಿದೆ. ಹೀಗಾಗಿ ಪಟ್ಟಣದ ಮುಖ್ಯ ರಸ್ತೆಯ ಅಭಿವೃದ್ಧಿಗಾಗಿ ನಾಗರಿಕರು ಅಂಗಡಿ ಮಾಲೀಕರು ಕೆಸಿಎಫ್ ರಸ್ತೆ ಕಾಮಗಾರಿ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೆ ಸಹಕರಿಸುವುದರ ಜೊತೆಗೆ ಸಣ್ಣಪುಟ್ಟ ಲೋಪದೋಷಗಳನ್ನು ಅಧಿಕಾರಿಗಳು ಸರಿಪಡಿಸಿಕೊಂಡು ಕಾಮಗಾರಿ ವಿಳಂಬ ಮಾಡದೆ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಕೆಸಿಎಫ್ ರಸ್ತೆ ಕಾಮಗಾರಿ ಪ್ರಾಜೆಕ್ಟ್ ಮ್ಯಾನೇಜರ್ ಮುತ್ತಣ್ಣ ಅವರಿಗೆ ಶಾಸಕ ಎಂ ಆರ್. ಮಂಜುನಾಥ್ ತಿಳಿಸಿದರು.