ಯಲ್ಲಾಪುರ: ಸಹಕಾರಿ ಕ್ಷೇತ್ರಕ್ಕೆ ಸ್ವಾಯತ್ತತೆ ಬೇಕೆಂಬುದು ನಿಜವಾದರೂ, ಅಲ್ಲಿ ಸ್ವೇಚ್ಛಾಚಾರಕ್ಕೆ ಮಾತ್ರ ಖಂಡಿತ ಅವಕಾಶ ಇರಕೂಡದು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ತಾಲೂಕಿನ ಹಿತ್ಲಳ್ಳಿ ವಿ.ಪ್ರಾ.ಗ್ರಾ.ಕೃ. ಸಂಘವು ದಿ. ದೇವೇಂದ್ರ ಹೆಗಡೆ ಜಾಲಿಮನೆ ವೇದಿಕೆಯಲ್ಲಿ ಜ. ೪ರಂದು ಸಹಕಾರ ರತ್ನ ಮತ್ತು ಹವ್ಯಕ ರತ್ನ ಪ್ರಶಸ್ತಿ ಪುರಸ್ಕೃತ ಜಿ.ಎನ್. ಹೆಗಡೆ ಹಿರೇಸರ ಅವರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಉಳಿದ ಸನ್ಮಾನಗಳಿಗಿಂತ ತವರೂರಿನ ಸನ್ಮಾನಕ್ಕೆ ಮಹತ್ವವಿದೆ. ಸಾಧನೆಯಿಂದ ವ್ಯಕ್ತಿತ್ವ ರೂಪಿಸಿಕೊಂಡು, ಸಮಾಜ ಗುರುತಿಸುತ್ತಿರುವ ಜಿ.ಎನ್. ಹೆಗಡೆಯವರಿಗೆ ಸನ್ಮಾನ ಖಂಡಿತ ಅರ್ಥಪೂರ್ಣ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಸ್ವಹಿತಾಸಕ್ತಿಯ ದುರುದ್ದೇಶಪೂರಿತ ರಾಜಕೀಯ ರೈತರಿಗೆ ಮಾರಕವಾಗುತ್ತಿರುವುದನ್ನು ಮನಗಂಡ ಸರ್ಕಾರ, ಸಹಕಾರಿ ಕ್ಷೇತ್ರದ ಕಾನೂನು ತಿದ್ದುಪಡಿಗೆ ಮುಂದಾಯಿತು ಎಂದರು.ರಾಜ್ಯದ ೮ ಜಿಲ್ಲೆಗಳಲ್ಲಿ ಮಾತ್ರ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳ ಪೈಕಿ ಉತ್ತರ ಕನ್ನಡದ ಕೆಡಿಸಿಸಿ ಬ್ಯಾಂಕು ಎಲ್ಲಕ್ಕಿಂತ ಮುಂಚೂಣಿಯಲ್ಲಿದೆ. ಈ ಬಾರಿ ಕೆಡಿಸಿಸಿ ಬ್ಯಾಂಕು ರೈತರಿಗೆ ₹೧೦೦೦ ಕೋಟಿ ಮಾಧ್ಯಮಿಕ ಬೆಳೆಸಾಲ ನೀಡಿದೆಯಲ್ಲದೇ, ೩೭೬ ಕುಟುಂಬಕ್ಕೆ ಮನೆ ಕಟ್ಟಲು ಸಾಲ ನೀಡಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ₹೨೧ ಕೋಟಿ ಸಾಲ ನೀಡಿದೆ ಎಂದರು.ಯಾವುದೇ ವ್ಯಕ್ತಿ ಶಾಶ್ವತವಲ್ಲದಿದ್ದರೂ ವ್ಯಕ್ತಿ ನಿರ್ಮಿತ ಸಂಘ- ಸಂಸ್ಥೆಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂಬುದನ್ನು ಯಾರೂ ಮರೆಯಬಾರದು. ಎಲ್ಲ ಬಗೆಯ ನೆರವು ನೀಡುವ ಸಂಘ- ಸಂಸ್ಥೆಗಳನ್ನು ಯಾವ ಕಾರಣಕ್ಕೂ ಕಡೆಗಣಿಸದಿರಿ ಎಂದರು.ಸನ್ಮಾನ ಸ್ವೀಕರಿಸಿದ ಜಿ.ಎನ್. ಹೆಗಡೆ ಮಾತನಾಡಿ, ತವರಿನಲ್ಲಿ ನಡೆದ ಈ ಕಾರ್ಯಕ್ರಮ ಧನ್ಯತಾ ಭಾವವನ್ನು ಮತ್ತು ಸಂತೃಪ್ತಿಯನ್ನು ನೀಡಿದೆ. ಕಡುಬಡತನದ ಕಷ್ಟಕಾರ್ಪಣ್ಯಗಳ ನಡುವಿನಿಂದ ಬೆಳೆದ ನಾನು, ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಂಡೆ. ಹಿರಿಯರಾದ ಜಿ.ಎ. ಭಟ್ಟ, ಟಿ.ಎಸ್. ಭಟ್ಟ ಮುಂತಾದವರ ಪ್ರೇರಣೆಯಿಂದ ಸಹಕಾರಿಯಾಗಿದೆ. ನನ್ನ ಬದುಕು ರೂಪಿಸಿದ ಈ ಸಂಘದ ಋಣವನ್ನು ನಾನೆಂದಿಗೂ ಮರೆಯಲಾರೆ. ನನ್ನ ಪರಿಶ್ರಮದ ಸಾಧನೆಗಾಗಿ ದೇವರ ಕೃಪೆಯಿಂದ ಅನೇಕ ಪ್ರಶಸ್ತಿಗಳೂ ದೊರೆತಿವೆ ಎಂದು ಸ್ಮರಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ವಿ. ಹೆಗಡೆ, ವೇದಿಕೆಯಲ್ಲಿದ್ದ ವೆಂಕಟರಮಣ ಶರ್ಮ, ಗ್ರಾಪಂ ಅಧ್ಯಕ್ಷ ಸತ್ಯನಾರಾಯಣ ಹೆಗಡೆ, ನಿರ್ದೇಶಕ ಎಸ್.ಎನ್. ಶೇಟ್, ಶಿರಸಿ ಟಿಎಂಎಸ್ ಮುಖ್ಯಕಾರ್ಯನಿರ್ವಾಹಕ ವಿನಯ ಹೆಗಡೆ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಶೇಟ್, ಹಾಲು ಡೈರಿ ಅಧ್ಯಕ್ಷ ಗೋಪಾಲ ಭಟ್ಟ ಮುಂತಾದವರು ಉಪಸ್ಥಿತರಿದ್ದರು. ಭಾರತಿ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ನಿರ್ದೇಶಕ ಗಣಪತಿ ಹೆಗಡೆ ಸ್ವಾಗತಿಸಿದರು. ಉಪಾಧ್ಯಕ್ಷ ಗಜಾನನ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಗೋಪಾಲ ಹೆಗಡೆ ವಂದಿಸಿದರು.