ಕನ್ನಡಪ್ರಭ ವಾರ್ತೆ ಬೀದರ್
ಸಭೆಯಲ್ಲಿ ಸಚಿವ ರಹೀಮ್ ಖಾನ್, ಎಂಎಲ್ಸಿ ಮಾರುತಿರಾವ್ ಮೂಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಗಿರೀಶ ಬದೋಲೆ, ಅರಣ್ಯ ಅಧಿಕಾರಿ ಆಶೀಷ ರೆಡ್ಡಿ, ಎಸ್ಪಿ ಪ್ರದೀಪ ಗುಂಟೆ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಅಮೃತರಾವ್ ಚೀಮಕೋಡೆ ಮತ್ತಿತರರು ಇದ್ದರು.
ದಾನದ ಜಮೀನು ಖಾಸಗಿ ಲೇಔಟ್‌ಗೆ, ಕಾದಾಟಕ್ಕೆ ಮೂಲ
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರು ತ್ರೈಮಾಸಿಕ ಸಭೆಯಲ್ಲಿ ನಾವು ಕೇಳಿದ ಪ್ರಶ್ನೆಗಳಿಗೆ ಇನ್ನೂವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ, ಹುಮನಾಬಾದ್ ಸರ್ವೆ ನಂಬರ್ 202 ಹಾಗೂ 205ರ ಅರಣ್ಯ ಭೂಮಿ ಹಾಗೂ ಸರ್ಕಾರಿ ಭೂಮಿಯಲ್ಲಿ ಕೆಲ ಖಾಸಗಿಯವರು ಕಬ್ಜೆ ಮಾಡಿದ್ದಾರೆ ಅದನ್ನು ತೆರವುಗೊಳಿಸಿ ಬಡವರಿಗೆ ನಿವೇಶನ ಕೊಡಿ ಎಂದರಲ್ಲದೆ ಗುರುನಾನಕ ಝೀರಾ ಟ್ರಸ್ಟ್‌ಗೆ ಸಿಖ್ ಸಮುದಾಯದವರ ಏಳ್ಗೆಗಾಗಿ ಕೊಟ್ಟಿರುವ ದಾನದ ಭೂಮಿಯನ್ನು ಲೇಔಟ್ ಆಗಿ ಪರಿವರ್ತಿಸಲಾಗಿದೆ ಈ ಕುರಿತು ಕ್ರಮಕೈಗೊಳ್ಳಲಾಗುತ್ತಿಲ್ಲ ಎಂದು ಆರೋಪಿಸುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಾತಿಗೆ ಇಳಿದಿದ್ದಾರೆ.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಈಶ್ವರ ಖಂಡ್ರೆ ಅವರು ಇದರ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸುತ್ತೇನೆ ಎಂದಾಗ ಮಧ್ಯ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಅವರು ಈ ಲೇಔಟ್ ಒಂದು ಟ್ರಸ್ಟ್ ಅಡಿ ಬರುತ್ತಿರುವುದರಿಂದ ಇದು ಅಕ್ರಮ ಅಲ್ಲ ಸಕ್ರಮವಾಗಿದೆ ಎಂದು ಹೇಳಿದಾಗ ಅಕ್ರಮ ಆಗಿಲ್ಲ ಎಂದಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲೆಸೆದಾಗ ಎಂಎಲ್ಸಿ ಸಹೋದರರಾದ ಡಾ. ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ಅವರು ಕೂಡ ಆ ಲೇಔಟ್ ಸಕ್ರಮವಾಗಿದೆ, ಇಲ್ಲಿ ಯಾವುದೇ ಕಾನೂನು ಬಾಹೀರ ಆಗಿಲ್ಲ, ಇದು ಸುಳ್ಳಾದರೆ ನಾವು ಸಹ ನಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಪ್ರತಿಸವಾಲು ಹಾಕಿದರು.ಫೊಲೀಸ್ ಅಧಿಕಾರಿಗಳ ತಕ್ಷಣದ
ಮಧ್ಯಪ್ರವೇಶ; ಗಲಾಟೆಗೆ ಬ್ರೇಕ್ಈ ಮಧ್ಯೆ ಸಚಿವರು ಯಾರೂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಿರುವಾಗಲೇ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರತ್ತ ಆಗಮಿಸಿದ ಆಕ್ರೋಶಿತ ಭೀಮರಾವ್ ಪಾಟೀಲ್ ಕೈ ಎತ್ತಿದಾಗ ಇಬ್ಬರ ಮಧ್ಯ ಭಾರಿ ಜಗಳದ ಆತಂಕ ಸೃಷ್ಟಿಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಎಎಸ್ಪಿ ಚಂದ್ರ ಕಾಂತ ಪೂಜಾರಿ ಇಬ್ಬರನ್ನೂ ದೂರ ಸರಿಸಿ, ಜಗಳ ಬಿಡಿಸಲು ಪ್ರಯತ್ನಿಸಿದರು, ಅದಾಗ್ಯೂ ಕೇಳದಿದ್ದಾಗ ಎಸ್ಪಿ ಪ್ರದೀಪ ಗುಂಟಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರೂ ಈ ಇಬ್ಬರನ್ನು ಶಾಂತಪಡಿಸಲು ಪ್ರಯತ್ನಿಸಿದರು ಅಷ್ಟೇ ಅಲ್ಲ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಈಶ್ವರ ಖಂಡ್ರೆ ಅವರು ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿ ಕೆಲಹೊತ್ತು ಸಭೆ ಮುಂದೂಡುವುದಾಗಿ ಘೋಷಿಸಿದರು.