ರಮೇಶ್ ಬಿದರಕೆರೆ
ಮಕ್ಕಳ ಕೊರತೆಯಿಂದ ಸರ್ಕಾರಿ ಶಾಲೆಗಳು ಸೊರಗುತ್ತಿರುವ ಕಾಲದಲ್ಲಿ ನಗರದ ಟಿಬಿ ವೃತ್ತದ ವಿದ್ಯುತ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಕ್ಷಕರ ಬದ್ಧತೆ ಮತ್ತು ಸಮರ್ಪಣಾ ಮನೋಭಾವದಿಂದ ನೋಡುಗರ ಗಮನ ಸೆಳೆಯುತ್ತಿದೆ.
ಒಂದರಿಂದ ಏಳನೇ ತರಗತಿಯವರೆಗೆ ಸುಮಾರು 75 ಮಕ್ಕಳು ಕಲಿಯುತ್ತಿದ್ದು ಉತ್ಸಾಹಿ ಮತ್ತು ವೃತ್ತಿಪರತೆಯ ಶಿಕ್ಷಕರಿದ್ದಾರೆ. ಮೂವರು ಶಿಕ್ಷಕರು ಹಾಗೂ ಒಬ್ಬರು ಅತಿಥಿ ಶಿಕ್ಷಕರಿರುವ ಶಾಲೆಯಲ್ಲಿ ಕೊಠಡಿ ಕೊರತೆಯಿಲ್ಲ. ಶಾಲೆಯ ಜಾಗ ಕೆಇಬಿ ಇಲಾಖೆಗೆ ಸೇರಿರುವುದರಿಂದ ಕೆಲವು ಸೌಲಭ್ಯಗಳು ಶಿಕ್ಷಣ ಇಲಾಖೆ ವತಿಯಿಂದ ಕೊಡಲಾಗುತ್ತಿಲ್ಲ. ಶಾಲೆಗೆ ಕಾoಪೌoಡ್ ಇಲ್ಲದ್ದು ಇಲ್ಲಿನ ಹಲವಾರು ವರ್ಷಗಳ ಸಮಸ್ಯೆಯಾಗಿದ್ದು ಶಾಲೆ ಜಾಗ ವಿದ್ಯುತ್ ಇಲಾಖೆಗೆ ಸೇರಿರುವುದರಿಂದ ಅನುದಾನ ಸಿಗುತ್ತಿಲ್ಲ. ಕಾಂಪೌoಡ್ ಇಲ್ಲದ್ದರಿಂದ ಹಂದಿಗಳು ನಾಯಿಗಳು ಶಾಲೆಯ ಕೊಠಡಿ ಬಾಗಿಲಿಗೆ ಬರುತ್ತಿದ್ದವು. ಶಾಲೆ ಮುಂದಿನ ಗಿಡ ಮರಗಳನ್ನು ರಕ್ಷಿಸಿಕೊಳ್ಳಲು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಮುಖ್ಯ ಶಿಕ್ಷಕರೇ ತಮ್ಮ ಸ್ವಂತ 20 ಸಾವಿರ ಹಣ ಖರ್ಚು ಮಾಡಿ ಬಿದಿರಿನ ತಡಿಕೆಯ ಆವರಣ ನಿರ್ಮಿಸಿದ್ದಾರೆ. ಆವರಣದೊಳಕ್ಕೆ ಹತ್ತಾರು ಲೋಡ್ ಮಣ್ಣು ಸುರಿಸಿಕೊಂಡು ತೆಂಗು ಮುಂತಾದ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಮಕ್ಕಳ ಕೈ ತೊಳೆಯಲು ವಾಶ್ ಬೇಸಿನ್, ನಲಿ ಕಲಿ ಕೊಠಡಿಗೆ ಫ್ಲೆಕ್ಸ್ ಗಳು, ಟಿವಿ, ಕಂಪ್ಯೂಟರ್, ಸ್ಪೆಷಲ್ ಯೂನಿಫಾರಂಗಳನ್ನು ಶಿಕ್ಷಕರೇ ದಾನಿಗಳ ಸಹಾಯದಿಂದ ಖರೀದಿಸಿದ್ದಾರೆ. ಇಲಾಖೆ ನೀಡುವ ಸಮವಸ್ತ್ರದ ಜೊತೆಗೆ ದಾನಿಗಳ ನೆರವು ಪಡೆದು ಗುಣಮಟ್ಟದ, ಆಕರ್ಷಕವಾದ ಸಮವಸ್ತ್ರಗಳನ್ನು ಶಿಕ್ಷಕರು ಖರೀದಿಸಿಕೊಟ್ಟಿದ್ದು ವಾರದಲ್ಲಿ ಎರಡು ದಿನ ಮಕ್ಕಳು ಸ್ಪೆಷಲ್ ಯೂನಿಫಾರ್ಮ್ ಧರಿಸಿ ಬರುತ್ತಾರೆ. ಪ್ರತಿ ಶನಿವಾರ ಮಕ್ಕಳಿಗೆ ಯೋಗ ತರಬೇತಿ ನೀಡಲಾಗುತ್ತಿದ್ದು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ದಿನಪತ್ರಿಕೆ ಓದಿಸುವುದು, ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿ ಉತ್ತರ ಕಲಿಸುವ ಪರಿಪಾಠವಿದೆ. ರಾಜ್ಯಗಳು, ಜಿಲ್ಲೆಗಳ ಹೆಸರು, ಮಗ್ಗಿ ಕಲಿಕೆಯನ್ನು ಪ್ರಾರ್ಥನ ಸಮಯದಲ್ಲೇ ಕಲಿಸಲಾಗುತ್ತಿದೆ. ನಲಿ ಕಲಿ ಕೊಠಡಿಯಲ್ಲಿ ಮಾಹಿತಿ ಸಂಗ್ರಹದ ಚಾರ್ಟ್‌ಗಳು ಮಾಸಿ ಹೋಗುವುದು, ಹರಿಯುವುದರಿಂದ ಶಿಕ್ಷಕರು ದಾನಿಗಳ ನೆರವು ಪಡೆದು ವ್ಯಾಕರಣ, ಜ್ಞಾನಪೀಠ ಪ್ರಶಸ್ತಿ ವಿಜೇತರ ಪಟ್ಟಿ, ಪ್ರಮುಖ ರಾಜರುಗಳ ಹೆಸರನ್ನು, ರಾಷ್ಟ್ರೀಯ ಹಬ್ಬಗಳ ಹೆಸರು, ವಚನಕಾರರ ಹೆಸರುಗಳ ಫ್ಲೆಕ್ಸ್ ಗಳನ್ನು ಮಾಡಿಸಿ ಅವುಗಳಿಗೆ ಫ್ರೆಮ್ ಹಾಕಿಸಿ ಗೋಡೆಗೆ ಹಾಕಲಾಗಿದ್ದು ನಲಿ ಕಲಿ ಕೊಠಡಿ ಸುಂದರವಾಗಿ ಕಾಣುತ್ತಿದೆ. ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ವಿಶ್ವಾಸ ಉಳಿಸಿಕೊಳ್ಳುವoತಾಗಿದೆ.1963 ರಲ್ಲಿ ಶುರುವಾದ ವಿದ್ಯುತ್ ಕಾಲೋನಿ ಶಾಲೆಗೆ ಮುಖ್ಯ ಶಿಕ್ಷಕಿ ಎಚ್.ಲೋಕಮ್ಮ, ಸಹ ಶಿಕ್ಷಕರಾದ ವಸಂತ ಕುಮಾರ್, ಎಂ.ಮಾರುತಿಯವರು ಹೊಸ ರೂಪ ನೀಡಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಉಳಿದ ಶಾಲೆಗಳವರಿಗೆ ಮಾದರಿಯಾಗಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಬೇಕಿದೆ: