ನಾಳೆ, ನಾಡಿದ್ದು ನಗರದಲ್ಲಿ ಚಿಕನ್ ಮಾರಾಟ ಇಲ್ಲ!

KannadaprabhaNewsNetwork |  
Published : Sep 02, 2026, 03:00 AM IST
Ajith | Kannada Prabha

ಸಾರಾಂಶ

ಕೋಳಿ ತ್ಯಾಜ್ಯದ ಮೇಲೆ ಕೇಜಿಗೆ 5 ರು. ತೆರಿಗೆ ವಿಧಿಸಿರುವ ಜಿಬಿಎ ಕ್ರಮವನ್ನು ವಿರೋಧಿಸಿ ಕರ್ನಾಟಕ ಕೋಳಿ ಮಾರಾಟಗಾರರ ಸಂಘ ಗುರುವಾರ ಮತ್ತು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದು, ಈ ಎರಡು ದಿನ ನಗರದಲ್ಲಿ ಕೋಳಿ ಮಾರಾಟ ರದ್ದು ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೋಳಿ ತ್ಯಾಜ್ಯದ ಮೇಲೆ ಕೇಜಿಗೆ 5 ರು. ತೆರಿಗೆ ವಿಧಿಸಿರುವ ಜಿಬಿಎ ಕ್ರಮವನ್ನು ವಿರೋಧಿಸಿ ಕರ್ನಾಟಕ ಕೋಳಿ ಮಾರಾಟಗಾರರ ಸಂಘ ಗುರುವಾರ ಮತ್ತು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದು, ಈ ಎರಡು ದಿನ ನಗರದಲ್ಲಿ ಕೋಳಿ ಮಾರಾಟ ರದ್ದು ಮಾಡಿದೆ.

ನಗರದಲ್ಲಿ ಈಗಾಗಲೇ ಎಲ್ಲಾ ಅಂಗಡಿಗಳಿಗೆ ಜಿಬಿಎ ಮಾರ್ಷಲ್‌ಗಳು ಹಾಗೂ ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ಅಧಿಕೃತವಾಗಿ ನಿಯೋಜನೆಯಾಗಿರುವ ಮಧ್ಯವರ್ತಿ ಕಂಪನಿಗಳ ಪ್ರತಿನಿಧಿಗಳು ತೆರಳಿ ತೆರಿಗೆ ನೀಡದಿದ್ದರೆ ಅಂಗಡಿ ಪರವಾನಗಿ ರದ್ದು ಮಾಡುವುದಾಗಿ ಬೆದರಿಕೆ ಹಾಕಿರುವುದರಿಂದ ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಸಂಘದ ಸದಸ್ಯರು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಸಂಘದ ಅಧ್ಯಕ್ಷ ಕೆ.ಎನ್.ನಾಗರಾಜು ಕನ್ನಡಪ್ರಭಕ್ಕೆ ತಿಳಿಸಿದರು.

ನಗರದಲ್ಲಿ ಸುಮಾರು 8 ಸಾವಿರ ಅಂಗಡಿಗಳಿದ್ದು, ಇಲ್ಲಿಂದ ಉತ್ಪತ್ತಿಯಾಗುವ ಕೋಳಿಯ ತಲೆ, ಕಾಲು, ಬೋಟಿ, ಪುಕ್ಕಗಳನ್ನು ಖಾಸಗಿ ವ್ಯಕ್ತಿಗಳು ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಜಿಬಿಎ ಉಸ್ತುವಾರಿಯ ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಪಾತ್ರ ಇರಲಿಲ್ಲ. ಆದರೆ, ಇದೀಗ ಕೋಳಿ ಮಾರಾಟಗಾರರ ಸಭೆಯನ್ನೂ ನಡೆಸದೆ, ತಮ್ಮ ಅಭಿಪ್ರಾಯವನ್ನೂ ಕೇಳದೆ ಏಕಾಏಕಿ ಕೋಳಿ ತ್ಯಾಜ್ಯದ ಮೇಲೆ ತೆರಿಗೆ ಹಾಕಿರುವುದು ಹಾಗೂ ತಮಗೇ ಕೋಳಿ ತ್ಯಾಜ್ಯ ನೀಡಬೇಕೆಂದು ಕಟ್ಟಪ್ಪಣೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.

ಅಲ್ಲದೆ, ತಾವು ರಾಜ್ಯದ ರೈತರು ಬೆಳೆಸಿದ ಕೋಳಿಗಳನ್ನು ಮಾರಾಟ ಮಾಡುತ್ತಿದ್ದು, ಜಿಬಿಎ ವಿಧಿಸುವ ತೆರಿಗೆಯನ್ನು ಗ್ರಾಹಕರ ಮೇಲೆ ಹಾಕಬೇಕಾಗುತ್ತದೆ. ಇದರಿಂದ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು ಹೆಚ್ಚುವರಿಯಾಗಿ ಕೆ.ಜಿಗೆ 5 ರುಪಾಯಿ ನೀಡಬೇಕಾಗುತ್ತದೆ. ಇದರಿಂದ ಈಗಾಗಲೇ ಬೆಲೆ ಏರಿಕೆಯಾಗಿ ವ್ಯಾಪಾರ ಇಳಿಕೆ ಕಂಡು ನಷ್ಟ ಅನುಭವಿಸುತ್ತಿರುವ ರೈತರಿಗೇ ಮತ್ತೆ ನಷ್ಟವಾಗುವ ಅವಕಾಶವಿರುತ್ತದೆ. ಆದ್ದರಿಂದ ಈ ನಿರ್ಧಾರ ಕೈಬಿಡಬೇಕೆಂದು ತಾವು ಹಲವು ಬಾರಿ ಜಿಬಿಎ ಹಾಗೂ ಘನತ್ಯಾಜ್ಯ ನಿರ್ವಹಣಾ ಮಂಡಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಗುರುವಾರ ಕೋಳಿ ಮಾರಾಟಗಾರರ ಬೃಹತ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆ ನಡೆಸುವುದರಿಂದ ಗುರುವಾರ, ಶುಕ್ರವಾರ (ಸೆ.3 ಮತ್ತು ಸೆ.4) ಕೋಳಿ ಮಾರಾಟ ಇರುವುದಿಲ್ಲ ಎಂದು ತಿಳಿಸಿದರು.

ಕೋಳಿ ತ್ಯಾಜ್ಯಕ್ಕೂ ಬೆಲೆ ಇದೆ

ಕೋಳಿಯಿಂದ ಉಂಟಾಗುವ ತ್ಯಾಜ್ಯವನ್ನು ತಾವು ಈಗಾಗಲೇ ಖಾಸಗಿ ವ್ಯಕ್ತಿಗಳಿಗೆ ನೀಡುತ್ತಿದ್ದು, ಅವರು ಕೋಳಿ ತ್ಯಾಜ್ಯದಿಂದ ನಾಯಿಗಳಿಗೆ ಬೇಕಾಗುವ ಸಿದ್ಧ ಆಹಾರಗಳಿಗೆ ಉಪ ಉತ್ಪನ್ನಗಳಾಗಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಕೋಳಿ ಮಾರಾಟಗಾರರಿಗೆ ಪಾಲಿಕೆಯೇ ತ್ಯಾಜ್ಯಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಅಧ್ಯಕ್ಷರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ೧೨ ಕೋಟಿ ರು. ಅನುದಾನ
ಕೆಇಎನಲ್ಲಿ ಸಂಘಟಿತ ಚಿನ್ನ ಕಳ್ಳ ಸಾಗಣೆ: ಕಸ್ಟಮ್ಸ್‌