ತಾಳಿಕಟ್ಟೆಯಿಂದ ದೊಗ್ಗನಾಳ್‌ವರೆಗೂ 12 ಕೋಟಿ ರು. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಗ್ರಾಮೀಣ ರಸ್ತೆಯನ್ನು ಅಭಿವೃದ್ಧಿಪಡಿಸಲು 12 ಕೋಟಿ ರು. ಅನುದಾನ ನೀಡುತ್ತಿದ್ದೇನೆ. ಆ ಹಣದಲ್ಲಿ ರಾಷ್ಟ್ರೀಯ ಹೆದ್ದಾರಿ-13 ರಿಂದ ಹಿಡಿದು ತಾಳಿಕಟ್ಟೆ ಗ್ರಾಮದವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸಿ ನಿರ್ಮಾಣ ಮಾಡಲಾಗುವುದು. ಇದರಿಂದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಭಾಗದಿಂದ ದಾವಣಗೆರೆಗೆ ಹೋಗುವ ಜನರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ತಾಳಿಕಟ್ಟೆಯಿಂದ ದೊಗ್ಗನಾಳ್‌ ಗ್ರಾಮದವರೆಗೆ 12 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹನುಮಲಿ ಗ್ರಾಮದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಸಿಂಗೇನಹಳ್ಳಿಯಿಂದ ಹಿಡಿದು ಕಸ್ತೂರಿ ನಗರದವರೆಗೆ 13 ಹಳ್ಳಿಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಅಷ್ಟು ಜನರ ಪ್ರಯಾಣಕ್ಕೆ ಅನುಕೂಲವಾಗುತ್ತದೆ. ರಸ್ತೆಯ ವಿಷಯದಲ್ಲಿ ವಿಶೇಷ ಮಾಹಿತಿ ಇರುವುದರಿಂದ ಇಂತಹ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದೇನೆ ಎಂದರು.

ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಮನಸ್ಸು ಇದ್ದರೆ ಏನೆಲ್ಲ ಉತ್ತಮ ಕೆಲಸಗಳನ್ನು ಮಾಡಬಹುದು. ಆ ದಿಕ್ಕಿನಲ್ಲಿ ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದರು.ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ, ಕೆರೆ ಅಭಿವೃದ್ಧಿ, ಕುಡಿಯುವ ನೀರಿನ ಕೆಲಸಗಳನ್ನು ಮಾಡುತ್ತಲೇ ಇದ್ದೇನೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಹಲವು ಉತ್ತಮ ಶಾಲೆಗಳು ತಲೆ ಎತ್ತಿ ನಿಂತಿವೆ. 15 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಈ ಕ್ಷೇತ್ರಕ್ಕೆ ಮಂಜೂರು ಮಾಡಿಸಿದ್ದೇನೆ ಎಂದರು.

ಬಸ್‌ ಸೌಕರ್ಯ ಇಲ್ಲದ ಕಡೆಗಳಲ್ಲಿ ಮಕ್ಕಳು ಶಾಲೆಗಳಿಗೆ ಹೋಗಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿ, ಕ್ಷೇತ್ರದ ಹಲವು ಶಾಲೆಗಳಿಗೆ ಸ್ವಂತ ಹಣದಿಂದ ಬಸ್‌ಗಳನ್ನು ಕೊಡುಗೆಯಾಗಿ ನೀಡಿರುವುದಲ್ಲದೆ, ಬಸ್‌ನ ವೆಚ್ಚ, ಚಾಲಕನ ವೇತನ ಮುಂತಾದವುಗಳನ್ನು ಸ್ವಂತ ಹಣದಲ್ಲಿ ಭರಿಸುತ್ತಿದ್ದೇನೆ. ಇದರಿಂದ ಮಕ್ಕಳ ಕೊರತೆ ಎದುರಿಸುತ್ತಿದ್ದ ಹಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಸಂತಸದ ವಿಷಯವೇ ಆಗಿದೆ ಎಂದರು.

ತಾಳಿಕಟ್ಟೆಯಲ್ಲಿ ಕೆಪಿಎಸ್, ಶಾಲೆ ಕೊಟ್ಟಿದ್ದೇನೆ. ಎಲ್‌ಕೆಜಿಯಿಂದ ಹಿಡಿದು ಪಿಯುಸಿವರೆಗೆ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದಲ್ಲದೆ ಬಾಳೆಹಣ್ಣು, ಹಾಲು, ಮಧ್ಯಾಹ್ನದ ಬಿಸಿಯೂಟ, ಸಂಜೆ ಪೌಷ್ಠಿಕಾಂಶವುಳ್ಳ ಕಾಳುಗಳನ್ನು ನೀಡಿ ಜೋಪಾನವಾಗಿ ಮನೆಗೆ ಕರೆದುಕೊಂಡು ಹೋಗಿ ತಲುಪಿಸಲಾಗುತ್ತದೆ. ಭಾರತದಲ್ಲಿ ಯಾವ ಶಾಸಕರು ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಬಸ್‌ಗಳನ್ನು ಬಿಟ್ಟಿಲ್ಲ. ಅಂತಹ ಕೆಲಸ ಹೊಳಲ್ಕೆರೆ ತಾಲೂಕಿನಲ್ಲಿ ಆಗಿವೆ ಎಂದರು.

ಜನಪ್ರತಿನಿಧಿಯಾದವರು ಮತದಾರರ ಕಷ್ಟ ಸುಖಗಳಿಗೆ ನೆರವಾಗಬೇಕಾದುದು ಸಹಜ. ಹಾಗೆ ನಿಮ್ಮ ಜೊತೆಗೆ ಇರುವ ಪ್ರತಿನಿಧಿ ಯಾರೆಂಬ ನೆನಪು ಚುನಾವಣೆ ವೇಳೆಯಲ್ಲಿ ಜ್ಞಾಪಕದಲ್ಲಿ ಇರಬೇಕು. ಕೆಲಸ ಮಾಡುವ ಚತುರತೆ, ವಿಶ್ವಾಸದಿಂದ ಕಾಣುವ ಮನೋಭಾವ ಇರುವ ಮುಖಂಡರನ್ನು ಮತದಾರರು ಗುರುತಿಸಬೇಕು ಎಂದು ಶಾಸಕರು ತಿಳಿಸಿದರು.

ಬಿಜೆಪಿ.ಮಂಡಲ ಅಧ್ಯಕ್ಷ ಕುಮಾರಣ್ಣ, ಡಿ.ಸಿ.ಮೋಹನ್, ಶೇಖರ್ ತಾಳಿಕಟ್ಟೆ, ಗಂಗಣ್ಣ, ಶೇಖರಣ್ಣ, ಷಣ್ಮುಖಪ್ಪ, ಶಿವಣ್ಣ, ಸುನೀಲ್, ಗುತ್ತಿಗೆದಾರ ರಾಜಣ್ಣ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.