ಕೆಇಎನಲ್ಲಿ ಸಂಘಟಿತ ಚಿನ್ನ ಕಳ್ಳ ಸಾಗಣೆ: ಕಸ್ಟಮ್ಸ್‌

KannadaprabhaNewsNetwork |  
Published : Sep 02, 2026, 03:00 AM IST
ತಾಳಿಕಟ್ಟೆಯಿಂದ ದೊಗ್ಗನಾಳ್ ವರೆಗೂ 12 ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಚಾಲನೆ. | Kannada Prabha

ಸಾರಾಂಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಮತ್ತು ನಿಷಿದ್ಧ ವಸ್ತುಗಳ ಕಳ್ಳಸಾಗಣೆ ದಂಧೆ ಸಂಘಟಿತ ರೂಪದಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಕಸ್ಟಮ್ಸ್‌ ಇಲಾಖೆ ವಕೀಲರು ಹೈಕೋರ್ಟ್‌ ಮುಂದೆ ಬಲವಾಗಿ ವಾದಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಮತ್ತು ನಿಷಿದ್ಧ ವಸ್ತುಗಳ ಕಳ್ಳಸಾಗಣೆ ದಂಧೆ ಸಂಘಟಿತ ರೂಪದಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಕಸ್ಟಮ್ಸ್‌ ಇಲಾಖೆ ವಕೀಲರು ಹೈಕೋರ್ಟ್‌ ಮುಂದೆ ಬಲವಾಗಿ ವಾದಿಸಿದರು.

ಸೌದಿಯಿಂದ ಅಕ್ರಮವಾಗಿ ನಗರಕ್ಕೆ ಸಾಗಣೆ ಮಾಡಿದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಹೊರಗೆ ಸಾಗಿಸಲು ಯತ್ನಿಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಕೋರಿ ನಂದೀಶ್‌ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಕೇಂದ್ರ ಕಸ್ಟಮ್ಸ್‌ ಇಲಾಖೆ ವಕೀಲರು ಹೀಗೆ ವಾದಿಸಿದರು.

ವಿಚಾರಣೆ ವೇಳೆ ಕೇಂದ್ರ ಕಸ್ಟಮ್ಸ್‌ ಪರ ವಕೀಲ ಮಧು ಎನ್‌.ರಾವ್‌, ವಿದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಚಿನ್ನ ಸಾಗಿಸಲಾಗುತ್ತದೆ. ಚಿನ್ನ ತರುವ ಪ್ರಯಾಣಿಕ, ವಿಮಾನ ಇಳಿದು ಹೊರಬರುವ ಮುನ್ನ ನಿರ್ದಿಷ್ಟ ಆಸನವನ್ನು ಕೆಳಗೆ ಮರೆ ಮಾಡಿ, ಚಿನ್ನ/ನಿಷಿದ್ಧ ವಸ್ತುವನ್ನು ಅಲ್ಲೇ ಬಿಟ್ಟು ಹೋಗುತ್ತಾನೆ. ನಂತರ ವಿಮಾನದ ಒಳಗೆ ಹೋಗುವ ಶಸ್ತ್ರಸಜ್ಜಿತ ಸ್ವಚ್ಛತಾ ಸಿಬ್ಬಂದಿ, ಮರೆಮಾಡಿದ ವಸ್ತುವನ್ನು ಪಡೆದು, ಶುಚಿಗೊಳಿಸುವ ಉಪಕರಣದಲ್ಲಿಟ್ಟುಕೊಂಡು, ಅದಕ್ಕೆ ಹೊದಿಕೆ ಹಾಕಿ ಮುಚ್ಚಿ ಪೂರ್ವನಿಗದಿತ ಸ್ಥಳದಲ್ಲಿ ಇಡುತ್ತಾರೆ. ಅಲ್ಲಿಂದ ಅದು ಮತ್ತೊಬ್ಬರ ಕೈ ಸೇರುತ್ತದೆ. ಅದನ್ನು ಕಸ ಅಥವಾ ಶುಚಿಗೊಳಿಸುವ ವಸ್ತುಗಳ ಮಧ್ಯೆ ಮರೆಮಾಡಿ, ವಿಮಾನ ಮತ್ತು ರನ್‌ವೇ ಪ್ರದೇಶದಿಂದ ಹೊರಗಡೆ ಸಾಗಿಸುತ್ತಾರೆ ಎಂದು ಮಧು ಎನ್‌. ರಾವ್‌ ನ್ಯಾಯಾಲಯಕ್ಕೆ ವಿವರಿಸಿದರು.

ಅಲ್ಲದೆ, ಪ್ರಕರಣದಲ್ಲಿ ವಿಮಾನದಲ್ಲಿ ಚಿನ್ನ ಅಥವಾ ನಿಷಿದ್ಧ ವಸ್ತುಗಳ ಕಳ್ಳಸಾಗಣೆಯ ಜಾಲದ ಕಾರ್ಯ ವೈಖರಿಯ ಬಗ್ಗೆ ಆಳವಾದ ತನಿಖೆಯ ಅಗತ್ಯ ಇರುವುದರಿಂದ ನಂದೀಶ್‌ ಅರ್ಜಿಯನ್ನು ವಜಾಗೊಳಿಸುವಂತೆ ಎಂದು ಕೋರಿದ್ದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆ ಇನ್ನೂ ಆರಂಭಿಕ ಹಂತದಲ್ಲಿದೆ. ವಿಚಾರಣೆ ನಡೆಯುವ ಮುನ್ನವೇ ಪ್ರಕರಣ ರದ್ದುಪಡಿಸಲಾಗದು. ಇಂತಹ ಪ್ರಕರಣಗಳಲ್ಲಿ ಸಂಘಟಿತ ಜಾಲದ ಚಟುವಟಿಕೆಗಳು ರಾಷ್ಟ್ರದ ಆರ್ಥಿಕ ಹಿತಾಸಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅರ್ಜಿದಾರರು ಸಕ್ಷಮ ಪ್ರಾಧಿಕಾರದ ಮುಂದೆ ತಮ್ಮ ವಿವರಣೆ ನೀಡಬಹುದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

ಪ್ರಕರಣವೇನು?:

ಸೌದಿ ಏರ್‌ಲೈನ್ಸ್ ವಿಮಾನವೊಂದು ಜೂ.29ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ನಿವಾಸಿಯಾದ ಎನ್‌.ನಂದೀಶ್‌ (33) ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕ್ಯಾಬಿನ್‌ ಕೇರ್‌ ಸಹಾಯಕನಾಗಿ ಕೆಲಸ ಮಾಡುವ ಸ್ವಚ್ಛತಾ ಸಿಬ್ಬಂದಿ. ಅಂದು ನಂದೀಶ್‌ ಪ್ರಯಾಣಿಕರು ಕುಳಿತುಕೊಳ್ಳುವ ಆಸನ ಶುಚಿಗೊಳಿಸಿದ್ದರು. ವಿಮಾನದ ಸೀಟಿನ ಸಂಖ್ಯೆ 39ಎ ನಲ್ಲಿದ್ದ ಎರಡು ಕೆ.ಜಿ ತೂಕದ ಚಿನ್ನದ ಗಟ್ಟಿ ತೆಗೆದುಕೊಂಡು ಕಸದಲ್ಲಿ ಇರಿಸಿದ್ದರು. ನಂತರ ಅದನ್ನು ಕಸ ಸಾಗಿಸುವ ವಾಹನದಲ್ಲಿ ವಿಮಾನ ನಿಲ್ದಾಣದಿಂದ ಹೊರಗೆ ಕಳುಹಿಸಲು ಪ್ರಯತ್ನಿಸಿದ್ಧಾರೆ ಎಂಬ ಆರೋಪ ನಂದೀಶ್‌ ಮೇಲಿದೆ. ಆತನ ವಿರುದ್ಧ ವಿಮಾನ ನಿಲ್ದಾಣ ಗುಪ್ತಚರ ಘಟಕದ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ೧೨ ಕೋಟಿ ರು. ಅನುದಾನ
ನಾಳೆ, ನಾಡಿದ್ದು ನಗರದಲ್ಲಿ ಚಿಕನ್ ಮಾರಾಟ ಇಲ್ಲ!