ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೆದಮುಳ್ಳೂರು ಗ್ರಾ.ಪಂ. ಅಧ್ಯಕ್ಷ ಮಾಳೇಟಿರ ಜಫ್ರಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಸಾಧನೆಗಾಗಿ ಇಸ್ಮಾಯಿಲ್ ಅವರನ್ನು ಅಭಿನಂದಿಸಲಾಯಿತು. ತಾಲೂಕು ಮಟ್ಟದ ಅತ್ಯುತ್ತಮ ಕಂಪ್ಯೂಟರ್ ಆಪರೇಟರ್ ಎಂಬ ವಿಶೇಷ ಪುರಸ್ಕಾರಕ್ಕೆ ಭಾಜನರಾದ ಕೆದಮುಳ್ಳೂರು ಗ್ರಾ.ಪಂ. ಡಾಟಾ ಎಂಟ್ರಿ ಆಪರೇಟರ್ ಬಿ.ಜಿ. ಕಾವ್ಯ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಮಾಳೇಟಿರ ಜಫ್ರಿ ಉತ್ತಪ್ಪ, ಸತತವಾಗಿ 3ನೇ ಬಾರಿಗೆ ಗ್ರಾ.ಪಂ. ಸದಸ್ಯರಾಗಿ ಚುನಾಯಿತರಾಗಿರುವ ಇಸ್ಮಾಯಿಲ್ ಅವರ ಸಾಧನೆ ಕೇವಲ ಗ್ರಾ.ಪಂ. ಮಟ್ಟದಲ್ಲಿ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಕೀರ್ತಿ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಾ.ಪಂ. ಸದಸ್ಯರಾಗಿಯೂ ಕ್ರಿಯಾಶೀಲರಾಗಿರುವ ಅವರು ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವುದು ಅಭಿನಂದನಾರ್ಹ. ಅಲ್ಲದೆ, ಜನಪರವಾದ ಕಾಳಜಿಯಿಂದ ಅತ್ಯುತ್ತಮವಾದ ಸೇವೆ ಸಲ್ಲಿಸಿದ ಗ್ರಾ.ಪಂ. ಸಿಬ್ಬಂದಿಯಾಗಿರುವ ಕಾವ್ಯ ಅವರಿಗೆ ತಾಲೂಕುಮಟ್ಟದ ಪುರಸ್ಕಾರ ಲಭಿಸಿದ್ದು, ಕೂಡ ಗ್ರಾ.ಪಂ. ಹಿರಿಮೆ ಹೆಚ್ಚಿಸಿದೆ ಎಂದು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷ ಪರಮೇಶ್ವರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಣಿ, ಹಿರಿಯ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಸಭಾ ಮುತ್ತಪ್ಪ, ಶೀಲಾ ಸೇರಿದಂತೆ ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.