ಕೆಡ್ಡಸ ಭೂಮಿ ತಾಯಿಗೆ ಗೌರವ ಸೂಚಿಸುವ ಹಬ್ಬ: ತುಳಸಿ ಮೋಹನ್‌

KannadaprabhaNewsNetwork |  
Published : Feb 13, 2026, 02:45 AM IST
ಪಿ ಕೆ-2.ಚೇರಂಬಾಣೆಗೌಡ ಮಹಿಳಾ ಒಕ್ಕೂಟದ ವತಿಯಿಂದಆಯೋಜಿಸಿದ  ಕೆಡ್ಡಸ ಹಬ್ಬದಕಾರ್ಯಕ್ರಮ ಶಾಸ್ತ್ರೋಕ್ತವಾಗಿಹಾಗೂ ಸಾಂಪ್ರದಾಯಕವಾಗಿ ಆಚರಿಸಲಾಯಿತು. | Kannada Prabha

ಸಾರಾಂಶ

ಕೆಡ್ಡಸ ಹಬ್ಬವು ಪ್ರಕೃತಿ ಹಾಗೂ ಭೂಮಿ ತಾಯಿಗೆ ಗೌರವ ಸೂಚಿಸುವ ಹಬ್ಬವಾಗಿದೆ ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಹೇಳಿದರು.

ನಾಪೋಕ್ಲು: ಕೆಡ್ಡಸ ಹಬ್ಬವು ಪ್ರಕೃತಿ ಹಾಗೂ ಭೂಮಿ ತಾಯಿಗೆ ಗೌರವ ಸೂಚಿಸುವ ಹಬ್ಬವಾಗಿದೆ ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಹೇಳಿದರು.

ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ವತಿಯಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ಕೆಡ್ಡಸ ಹಬ್ಬದ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಡ್ಡಸವು ರೈತರು ಕೃಷಿ ಕಾರ್ಯದಿಂದ ಕೊಂಚ ವಿರಾಮ ಪಡೆಯುವ ಹಬ್ಬ. ಈ ಸಂದರ್ಭ ಸೋತು ಸೊರಗಿದ ಗಿಡ ಮರಗಳಲ್ಲಿ ಚಿಗುರು ಹೂ ಮೊಗ್ಗು ಕಾಣಿಸಿಕೊಳ್ಳುತ್ತದೆ. ಜೇನು ದುಂಬಿಗಳ ಹಾರಾಟ ಬಹಳವಾಗಿರುತ್ತದೆ. ಪ್ರಕೃತಿ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡು ಮುಂದಿನ ಫಲ ನೀಡಲು ಸುಸಮಯವಾಗಿರುತ್ತದೆ. ಇಂತಹ ಸಮಯದಲ್ಲಿ ಪ್ರಕೃತಿಗೆ ಹಾನಿಯಾಗುವ ಯಾವುದೇ ಕಾರ್‍ಯಗಳನ್ನು ಮಾಡಿದರೆ ಫಲ ಹಾನಿಯಾಗುತ್ತದೆ ಎಂಬುದು ವೈಜ್ಞಾನಿಕವಾಗಿದೆ ಎಂದರು.

ಭೂಮಿ ಮೇಲಿರುವ ನೈಸರ್ಗಿಕ ಸಂಪತ್ತು ನೆಲ ದೇವಿಯ ಕೊಡುಗೆ. ಹೀಗಿರುವಾಗ ಭೂ ತಾಯಿ ಋತುಮತಿಯಾಗಿ ಫಲವತಿಯಾಗುವ ಎಲ್ಲ ಲಕ್ಷಣಗಳಿರುವುದರಿಂದ ಅವಳಿಗೆ ವಿಶ್ರಾಂತಿ ನೀಡಲು ಪರಿಸರಕ್ಕೆ ಹಾನಿಯಾಗುವ ಯಾವುದೇ ಕೃಷಿ ಕೆಲಸಗಳನ್ನು ಮಾಡಬಾರದು ಎಂಬುದು ಸಾಂಪ್ರದಾಯಿಕ ವಿಚಾರ.ಕೆಡ್ಡಸವನ್ನು ಬೇಟೆಯ ಹಬ್ಬ ಎಂದೂ ಕರೆಯುತ್ತಾರೆ. ವಿರಾಮದ ಕಾಲವಾದ್ದರಿಂದ ಹಿಂದೆಲ್ಲ ಹೊಳೆಗಳಲ್ಲಿ ಮೀನು ಹಿಡಿಯುತ್ತಿದ್ದರು. ಹಾಗೆಯೇ ಕಾಡುಪ್ರಾಣಿಗಳಿಗೆ ಈ ಸಮಯದಲ್ಲಿ ಕಾಲುನೋವು ಬರುವ ಕಾರಣ ಅವುಗಳನ್ನು ಸುಲಭವಾಗಿ ಬೇಟೆಯಾಡಲು ಸಾಧ್ಯವಾಗುತ್ತದೆ.

ಆದ್ದರಿಂದ ಮಹಿಳೆಯರು ಕೂಡ ಒನಕೆ ಹಿಡಿದು ಬೇಟೆಯಾಡುತ್ತಿದ್ದರು. ಒಟ್ಟಿನಲ್ಲಿ ಕೆಡ್ಡಸ ವಿಶ್ರಾಂತಿಯ ಹಬ್ಬ, ಮಾಂಸಾಹಾರದ ಹಬ್ಬ ಎಂದು ಹೆಸರು ಪಡೆದಿದೆ ಎಂದರು. ಒಕ್ಕೂಟದ ಉಪಾಧ್ಯಕ್ಷೆ ಹೊಸೊಕ್ಲು ಲತಾ ಮೊಣ್ಣಪ್ಪ ಮಾತನಾಡಿ, ಕೆಡ್ಡಸ ಹಬ್ಬವನ್ನು ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಆಚರಣೆ ಮಾಡುತ್ತಾರೆ. ಅದರಲ್ಲೂ ಪ್ರಾಂತ್ಯವಾರು ಆಚರಣೆಯಲ್ಲಿ ವ್ಯತ್ಯಾಸಗಳಿರುತ್ತವೆ. ಪೂರ್ವ ಪದ್ಧತಿಯಂತೆ ನಮಗೆ ತಿಳಿದಷ್ಟು ಮಟ್ಟಿಗೆ ಇಂತಹ ಅಪರೂಪದ ಹಬ್ಬಗಳನ್ನು ಆಚರಿಸುವುದರಿಂದ ಮುಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯಿಕ ಆಚರಣೆಗಳು ತಿಳಿಯುವುದಲ್ಲದೆ ಅದರ ಪೋಷಣೆಯೂ ಆಗುತ್ತದೆ. ಅಲ್ಲದೆ ನಮ್ಮ ಸಮುದಾಯದ ಆಚರಣೆಗಳ ಪರಿಚಯವೂ ಆಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು ಭತ್ತಕ್ಕೆ ಕಲ್ಲು ಮುಳ್ಳು ಹೇರಿ, ಭೂಮಿ ತಾಯಿಗೆ ಶಾಸ್ತ್ರೋಕ್ತವಾಗಿ ಎಣ್ಣೆ ಎರೆದು ಸಾಂಪ್ರದಾಯಕವಾಗಿ ಆಚರಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷೆ ಕೂರನ ಸುಶೀಲ ಅಪ್ಪಾಜಿ, ಕಾರ್‍ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಸಂಘಟನಾ ಕಾರ್‍ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ, ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು.ಕಾಳೇರಮ್ಮನ ರಶಿ ಅಶೋಕ್ ಪ್ರಾರ್ಥಿಸಿದರು. ಹೊಸೊಕ್ಲು ಲತಾ ಮೊಣ್ಣಪ್ಪ ಸ್ವಾಗತಿಸಿದರು. ಕೂಡಕಂಡಿ ಸೋನಿ ಸುದೀಪ್ ನಿರೂಪಿಸಿದರು. ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛ ಕೊಡಗು ನಿರ್ಮಾಣ ಎಲ್ಲರ ಜವ್ಬಬ್ದಾರಿ: ಡಾ. ಮಂತರ್‌ ಗೌಡ
ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್ ವಾರ್ಷಿಕ ಮಹೋತ್ಸವ