ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೂ ಮುನ್ನ ಶನಿವಾರ ಬೆಳಗ್ಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿ ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟರು.

ಬೆಂಗಳೂರು : ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೂ ಮುನ್ನ ಶನಿವಾರ ಬೆಳಗ್ಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿ ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟರು.

ಶಾಸಕರ ದಂಡೇ ಬಂದಿತ್ತು

ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್‌ ಅವರ ಸದಾಶಿವನಗರದ ಕೆಂಕೇರಿ ನಿವಾಸಕ್ಕೆ ಶನಿವಾರ ಶಾಸಕರ ದಂಡೇ ಬಂದಿತ್ತು. ಸಿದ್ದರಾಮಯ್ಯ ಅವರು ತುಮಕೂರು ಪ್ರವಾಸಕ್ಕೆ ಹೊರಡುವುದಕ್ಕೂ ಮುನ್ನ ಶಾಸಕರಾದ ಪುಟ್ಟರಂಗಶೆಟ್ಟಿ, ರಘುಮೂರ್ತಿ, ವಿಧಾನಪರಿಷತ್‌ ಸದಸ್ಯರಾದ ಐವಾನ್‌ ಡಿಸೋಜಾ, ಬಲ್ಕೀಸ್‌ ಬಾನು ಸೇರಿ ಇನ್ನಿತರರು ಕಾವೇರಿ ನಿವಾಸಕ್ಕೆ ಬಂದು ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದರು. ಈ ವೇಳೆ ಎಲ್ಲರ ಮನವಿ ಆಲಿಸಿದ ಸಿದ್ದರಾಮಯ್ಯ ಮಾತನಾಡುವುದಾಗಿ ತಿಳಿಸಿದರು.

ಸಾಲುಸಾಲು ಶಾಸಕರು ಆಗಮಿಸಿ ಶುಭ

ಅದೇ ರೀತಿ ಡಿ.ಕೆ.ಶಿವಕುಮಾರ್‌ ಅವರ ಸದಾಶಿವನಗರದ ಕೆಂಕೇರಿ ನಿವಾಸಕ್ಕೂ ಶನಿವಾರ ಸಾಲುಸಾಲು ಶಾಸಕರು ಆಗಮಿಸಿ ಶುಭ ಕೋರಿದರು. ಪ್ರಮುಖವಾಗಿ ಸತೀಶ್‌ ಜಾರಕಿಹೊಳಿ ಮಧ್ಯಾಹ್ನದ ವೇಳೆಗೆ ಭೇಟಿ ನೀಡಿ ಡಿಕೆಶಿ ಅವರೊಂದಿಗೆ ಚರ್ಚೆ ನಡೆಸಿದರು. ಉಳಿದಂತೆ ಶಿವಲಿಂಗೇಗೌಡ, ಶ್ರೀನಿವಾಸ್‌ ಮಾನೆ, ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್‌, ಮಂಕಾಳ ವೈದ್ಯ, ಜಿ.ಎಸ್‌.ಪಾಟೀಲ್‌, ಪ್ರಸಾದ್‌ ಅಬ್ಬಯ್ಯ, ರಾಜಾ ವೆಂಕಟಪ್ಪ ನಾಯಕ, ಬಿ.ಟಿ. ಚಿಮ್ಮನಕಟ್ಟಿ, ಆನೆಕಲ್‌ ಶಿವಣ್ಣ, ಬಸವರಾಜು ಶಿವಗಂಗಾ, ವಿಧಾನಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಭೇಟಿ ನೀಡಿ ಶುಭ ಕೋರಿದರು. ಈ ವೇಳೆ ಬಹುತೇಕ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟರು.