ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಉದ್ದೇಶದಿಂದ ಜಿಲ್ಲಾ ಮಿಷನ್ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದೆ.
ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಉದ್ದೇಶದಿಂದ ಜಿಲ್ಲಾ ಮಿಷನ್ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಸದಸ್ಯರೊಂದಿಗೆ ಪ್ರತಿವಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಚಿವರ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಒಮ್ಮೆ ಸಮಿತಿ ಸಭೆ ನಡೆಸಲಾಗುವುದು. ನಾಳೆಯಿಂದ ಸಮಿತಿ ಸದಸ್ಯರು ತಮಗೆ ಹಂಚಿಕೆ ಮಾಡಲಾದ ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ನಡೆಸಿ, ಪೂರ್ಣಗೊಂಡಿರುವ ಕಾಮಗಾರಿಗಳ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಬೇಕು. ಇಲಾಖಾವಾರು ಕಾಮಗಾರಿಗಳ ಪಟ್ಟಿಯನ್ನು ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಅಲ್ಲದೆ, ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು ಹಾಗೂ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಬಹುದಾದ ಕಾಮಗಾರಿಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಕಾಮಗಾರಿಗಳ ಸ್ಥಿತಿಗತಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗಿದ್ದು, ಯಾವ ಯಾವ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಹಾಗೂ ಎಷ್ಟು ಕಾಮಗಾರಿಗಳಿಗೆ ಇನ್ನೂ ಟೆಂಡರ್ ಪ್ರಕ್ರಿಯೆ ಕೈಗೊಳ್ಳಬೇಕಿದೆ ಎಂಬುದರ ಮಾಹಿತಿಯನ್ನು ಸಂಗ್ರಹಿಸಿ, ಬಾಕಿ ಇರುವ ಕಾಮಗಾರಿಗಳಿಗೆ ಶೀಘ್ರವಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮವಹಿಸುವಂತೆ ಸೂಚಿಸಿದರು.ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ತೊಂದರೆಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಿತ ಉಪ ವಿಭಾಗದ ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಹಾಗೆಯೇ ಎಷ್ಟು ಕಾಮಗಾರಿಗಳಿಗೆ ಎಂಒಯು ಮಾಡಲಾಗಿದೆ ಎಂಬ ಮಾಹಿತಿಯನ್ನು ಪಡೆದು, ಎಂಒಯು ಮಾಡಿಕೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಜೊತೆಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದ್ದು ಅದನ್ನು ಸದಸ್ಯರು ಪರಿಶೀಲಿಸಿ ವರದಿ ನೀಡಬೇಕು ಲೋಪ ಕಂಡು ಬಂದಲ್ಲಿ ಸಮಿತಿಯ ಗಮನಕ್ಕೆ ತರಬೇಕು ಎಂದರು. ಸಿಎಂಐಡಿಪಿ ಯೋಜನೆಯಡಿ ಮಂಜೂರಾಗಿರುವ ಆದರೆ ಇನ್ನೂ ಆರಂಭವಾಗದ ಕಾಮಗಾರಿಗಳನ್ನು ತುರ್ತಾಗಿ ಪ್ರಾರಂಭಿಸಲು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ತಿಪಟೂರು ಉಪ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕಾಮಗಾರಿಗಳು ಬಾಕಿ ಇರುವುದರಿಂದ ಅವುಗಳನ್ನು ಆದ್ಯತೆಯ ಮೇರೆಗೆ ಆರಂಭಿಸಿ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾ ಮಿಷನ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.