‘ರೈತನ ಮದುವೆ ಆಗೋ ಹೆಣ್ಮಕ್ಕಳ ಹೆಸರಲ್ಲಿ ಠೇವಣಿ ಇಡಿ’

KannadaprabhaNewsNetwork |  
Published : Feb 18, 2026, 02:00 AM IST
Farmers

ಸಾರಾಂಶ

ರೈತನ ಮಗನ ಮದುವೆಯಾಗುವ ಹೆಣ್ಣು ಮಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ.20ರಷ್ಟು ಮೀಸಲಾತಿ, ರೈತ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಕನಿಷ್ಠ 10 ಲಕ್ಷ ರು. ಠೇವಣಿ, ವನ್ಯಪ್ರಾಣಿಗಳಿಂದ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರು. 

 ಬೆಂಗಳೂರು :  ರೈತನ ಮಗನ ಮದುವೆಯಾಗುವ ಹೆಣ್ಣು ಮಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ.20ರಷ್ಟು ಮೀಸಲಾತಿ, ರೈತ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಕನಿಷ್ಠ 10 ಲಕ್ಷ ರು. ಠೇವಣಿ, ವನ್ಯಪ್ರಾಣಿಗಳಿಂದ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರು. ಪರಿಹಾರ ಮತ್ತು ಖಾಯಂ ಉದ್ಯೋಗ, ಪಂಜಾಬ್‌ ಮಾದರಿಯಲ್ಲಿ ರಾಜ್ಯಾದ್ಯಂತ ಟೋಲ್‌ ಬಂದ್‌ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿನ ಬಜೆಟ್‌ನಲ್ಲಿ ಘೋಷಿಸುವಂತೆ ರೈತ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ 2026-27ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ರಾಜ್ಯದ ವಿವಿಧ ರೈತ ಸಂಘಟನೆಗಳ ಮುಖಂಡರು, ಕೃಷಿ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಪ್ರಗತಿಪರ ರೈತರು ಹಲವು ಬೇಡಿಕೆ ಮಂಡಿಸಿದರು.

ರೈತರ ಹೊಲದಲ್ಲೇ ಕಬ್ಬಿನ ದರ ನಿಗದಿ

ರೈತರ ಹೊಲದಲ್ಲೇ ಕಬ್ಬಿನ ದರ ನಿಗದಿಪಡಿಸುವುದು, ಕಟಾವು, ಸಾಗಣೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳು ಭರಿಸುವುದು, ರಾಜ್ಯಾದ್ಯಂತ ಎಲ್ಲ ಕೆರೆಗಳ ಹೂಳು ತೆಗೆಸಿ ರೈತರ ಜಮೀನಿಗೆ ಸಾಗಿಸುವುದು, ಕಿಸಾನ್‌ ಸಮ್ಮಾನ್‌ ಯೋಜನೆ ಪುನರ್‌ ಜಾರಿಗೊಳಿಸಿ ರೈತರಿಗೆ 10 ಸಾವಿರ ರು. ದನ ಸಹಾಯ ನೀಡುವುದು, ಭೂ ಸುಧಾರಣೆ ಕಾಯ್ದೆ ರದ್ದು, ಎಪಿಎಂಸಿ ಕಾಯ್ದೆ ರದ್ದು, ಕಳಪೆ ಕೀಟನಾಶಕ, ಬೀಜ ನಕಲಿ ಗೊಬ್ಬರ. ನರ್ಸರಿ ಸಸಿಗಳು ಮಾರಾಟ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸುವಂತೆ ಮನವಿ ಮಾಡಿದರು.

ರೈತರ ಎಲ್ಲ ಬೆಳೆಗಳಿಗೂ ವಿಮೆ

ಮುಂದುವರೆದು, ರೈತರ ಎಲ್ಲ ಬೆಳೆಗಳಿಗೂ ವಿಮೆ ಜಾರಿ, ರೈತರ ಭೂಮಿ ಮೌಲ್ಯದ ಶೇ.75ರಷ್ಟು ಸಾಲ ನೀಡುವ ಯೋಜನೆ, ಕಬ್ಬಿನ ಅಲ್ಪಾವಧಿ ಬೆಳೆ ಸಾಲ 18 ತಿಂಗಳಿಗೆ ವಿಸ್ತರಿಸುವುದು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಒದಗಿಸಲು ಕನಿಷ್ಠ 20 ಸಾವಿರ ಕೋಟಿ ರು. ಆವರ್ತ ನಿಧಿ ಮೀಸಲು, ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ತಿದ್ದುಪಡಿ ಕಾಯ್ದೆ ಹಿಂಪಡೆಯುವುದು, ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು, ಬಜೆಟ್‌ನಲ್ಲಿ ಘೋಷಿಸುವಂತೆ ಕೋರಿದರು.

ಕೃಷಿ ಸಚಿವ ಚಲುವರಾಯಸ್ವಾಮಿ, ಪಶು ಸಂಗೋಪನೆ ಸಚಿವ ವೆಂಕಟೇಶ್‌, ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ್‌, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿ ವಿವಿಧ ರೈತ ಸಂಘಟನೆಗಳ ಮುಖಂಡರು, ಪ್ರಗತಿಪರ ರೈತರು ಈ ಸಭೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸರ್‌ ಪರಿಶೀಲನೆಗೆ.... ಸ್ವಾಮಿಜಿ ಕೇಸ್ ಮಹಿಳೆಗಾಗಿ ಹುಡುಕಾಟ
ವಿಜಯೇಂದ್ರ, ಯತ್ನಾಳ ಮನೆಗೆ ಹೊಗೋದು ನಿಶ್ಚಿತ: ಸಚಿವ ಎಂಬಿಪಾ