ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಇರಿಸಿದ್ದು ವೃತ್ತಿಪರ ವಂಚಕರು!

KannadaprabhaNewsNetwork |  
Published : Nov 07, 2023, 01:30 AM IST

ಸಾರಾಂಶ

ಕಡಿಮೆ ಬಡ್ಡಿ ದರಲ್ಲಿ ಸಾಲ ನೆಪದಲ್ಲಿ ವಂಚಿಸುತ್ತಿದ್ದ ತಂಡದಿಂದ ನಡೆದ ಕೃತ್ಯ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣ ಆವರಣದಲ್ಲಿ ಆತಂಕ ಉಂಟುಮಾಡಲು ಕಾರಣವಾದ, ವಾರಸುದಾರರಿಲ್ಲದ ಬಾಕ್ಸ್ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇವರು ವೃತ್ತಿಪರ ವಂಚಕರು ಎಂದು ತಿಳಿದುಬಂದಿದೆ.

ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಗಳನ್ನು ಭದ್ರಾವತಿ ಮೂಲಕ ನಸ್ರುಲ್ಲಾ ಮತ್ತು ತಿಪಟೂರು ಮೂಲದ ಜಬ್ಬಿ ಎಂದು ಗುರುತಿಸಲಾಗಿದೆ. ಇವರಿಬ್ಬರು ಮೂಲತಃ ವಂಚಕರು. ಹಲವಾರು ಮಂದಿಗೆ ವಂಚಿಸಿದ್ದಾರೆ. ಹಣದ ಅವಶ್ಯಕತೆ ಇರುವವರನ್ನು ಗುರುತಿಸಿ ತಾವು ಕಡಿಮೆ ಬಡ್ಡಿ ದರದಲ್ಲಿ ಹಣ ಕೊಡಿಸುವುದಾಗಿ ಆಮಿಶ ತೋರಿಸುತ್ತಿದ್ದರು.

ಮುಂಗಡವಾಗಿ ಕೆಲವು ಲಕ್ಷ ಲೆಕ್ಕದಲ್ಲಿ ಬಡ್ಡಿ ಹಣ ಪಡೆಯತ್ತಿದ್ದರು. ಜೊತೆಗೆ ಖಾಲಿ ಚೆಕ್ ಕೂಡ ಪಡೆಯುತ್ತಿದ್ದರು. ಒಂದೆರಡು ದಿನಗಳ ಒಳಗಾಗಿ ತಮಗೆ ಹಣ ತಲುಪಿಸುವುದಾಗಿ ಹೇಳುತ್ತಿದ್ದ ಇವರು ರಟ್ಟಿನ ಬಾಕ್ಸ್ ನೀಡಿ, ಇದರಲ್ಲಿ ಹಣವಿದ್ದು, ಯಾವಾಗ ಇನ್ನು ತೆರೆಯುತ್ತೀರೋ ಆಗಿನಿಂದ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಬಾಕ್ಸ್ ತೆರೆಯುವ ಮುನ್ನ ತಮಗೆ ತಿಳಿಸಬೇಕೆಂಬ ಷರತ್ತು ಇಡುತ್ತಿದ್ದರು.

ಇದೇ ರೀತಿ ಗೋವಾ ಮೂಲದ ರಾಜೇಶ್ ಎಂಬವರಿಗೆ ಹಣ ಕೊಡಿಸುವ ಒಪ್ಪಂದ ಮಾಡಿಕೊಂಡು ಮುಂಗಡ ಬಡ್ಡಿ ಹಣ ಮತ್ತು ಚೆಕ್ ಪಡೆದಿದ್ದಾರೆ. ಅದರಂತೆ ಶನಿವಾರ ರಾತ್ರಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹಣ ಪಡೆಯುವಂತೆ ತಿಳಿಸಿದ್ದಾರೆ. ಆದರೆ, ಕಾರಣಾಂತರದಿಂದ ರಾಜೇಶ್ ಅವರಿಗೆ ಶಿವಮೊಗ್ಗಕ್ಕೆ ಬರಲು ಸಾಧ್ಯವಾಗಿಲ್ಲ. ಇವರಿಗಾಗಿ ಕಾದ ವಂಚಕರು ಬಳಿಕ ಕಸ ತುಂಬಿದ ಬಾಕ್ಸ್ ಅನ್ನು ನಿಲ್ದಾಣದಲ್ಲಿಯೇ ಬಿಟ್ಟು ಹೋಗಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚುರುಕಾದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಬೆನ್ನುಹತ್ತಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿದ್ದ ಈ ಇಬ್ಬರನ್ನು ಹೆಡೆಮುರಿ ಕಟ್ಟಿದ್ದಾರೆ.

ಈ ಹಿಂದೆ ಕೂಡ ತಿಪಟೂರಿನ ಗಿರೀಶ್ ಎಂಬವರಿಗೂ ಇದೇ ರೀತಿ ವಂಚಿಸಿದ್ದರು. ಇವರು ಕೂಡ ದೂರು ನೀಡಲು ಮುಂದಾಗಿದ್ದು, ಇವರ ದೂರಿನ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಲಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ