ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರ್ಯಾಯ ಶ್ರೀ ಪುತ್ತಿಗೆ ಮಠಗಳ ಸಹಯೋಗದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಭಗವಂತ ಶ್ರೀ ಕೃಷ್ಣನ ಅವತಾರವು ವಿಶಿಷ್ಟವಾದದ್ದು. ಕೃಷ್ಣನ ರೂಪದಂತೆ ಆತನ ಅವತಾರವೂ ಆಕರ್ಷಕ. ಕೆಟ್ಟದನ್ನು ದಮನ ಮಾಡಿ ಜಗತ್ ಕಲ್ಯಾಣಕ್ಕಾಗಿ ಉತ್ತಮ ಮಾರ್ಗ ನೀಡಿದ ಶ್ರೀ ಕೃಷ್ಣನ ಸಂದೇಶ ಪಾಲನೆಯಿಂದ ಜಗತ್ತಿನ ಸುಸೂತ್ರ ನಿರ್ವಹಣೆ ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರ್ಯಾಯ ಶ್ರೀ ಪುತ್ತಿಗೆ ಮಠಗಳ ಸಹಯೋಗದಲ್ಲಿ ನಡೆದ ಸಾಂಸ್ಕೃತಿ ಸೌರಭ - 2025-26ನೇ ಸಾಲಿನ ಹಿರಿಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಸುವುದು ಪಾಲಕರ ಮುಖ್ಯ ಕರ್ತವ್ಯ. ಅಂತೆಯೇ ಜಗತ್ತು ಉತ್ತಮ ರೀತಿಯಲ್ಲಿ ಸಾಗಬೇಕಾದರೆ ಸಜ್ಜನರಿಗೆ ಸದಾ ಪೋತ್ಸಾಹ ದೊರೆಯಬೇಕು, ಹಾಗಾದಾಗ ಮಾತ್ರ ಜಗತ್ತಿನ ಕಲ್ಯಾಣ ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯಶ್‌ಪಾಲ್ ಎ ಸುವರ್ಣ, ಭಾರತೀಯ ಸಂಪ್ರದಾಯ ಅನನ್ಯವಾದದ್ದು, ಇಂದಿನ ಯುವ ಪೀಳಿಗೆಯು ಭಾರತೀಯ ಸಂಪ್ರದಾಯ, ಆಚಾರ-ವಿಚಾರಗಳನ್ನು ಮರೆಯದೆ ಪಾಲಿಸಬೇಕು. ಜಿಲ್ಲೆಯಲ್ಲಿ ಶ್ರೀ ಕೃಷ್ಣ ಜನ್ಮಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬಂದಿದ್ದು, ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ್ಮಾಷ್ಟಮಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು. ಓಂಪ್ರಕಾಶ್ ಭಟ್ ಸಂಪಾದಿತ ‘ಸುಗುಣೇಂದ್ರ ತೀರ್ಥರು ಕಂಡಂತೆ ಶ್ರೀ ಕೃಷ್ಣ’ ಕೃತಿ ಅನಾವರಣಗೊಳಿಸಲಾಯಿತು.ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಲಯನ್ಸ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಶ್ರೀಧರ ಮಯ್ಯ ಮತ್ತಿತರರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ವಿದ್ವಾಂಸ ಡಾ. ಗೋಪಾಲಾ ಚಾರ್ ಹಾಗೂ ವಿಜೇತ ಶೆಟ್ಟಿ ನಿರೂಪಿಸಿದರು.ಬಳಿಕ ‘ಶ್ರೀಕೃಷ್ಣ ಪುತ್ರ ವಿವಾಹ’ ಯಕ್ಷಗಾನ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಶ್ರೀ ಕೃಷ್ಣ ಸಂಗೀತ ಸುಧೆ, ಶ್ರೀ ಕೃಷ್ಣ ಲೀಲೋತ್ಸವ, ಜನಪದ ನೃತ್ಯ, ಕಂಸಾಳೆ ಮತ್ತು ವೀರಗಾಸೆ, ದಾಸರ ಪದಗಳು, ಚಂಡೆವಾದನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.