ಜನಪರ ಆಡಳಿತಕ್ಕೆ ಕೆಂಪನಂಜಮ್ಮಣ್ಣಿ ಮಾದರಿ: ಎಚ್.ಆರ್.ಕನ್ನಿಕ

KannadaprabhaNewsNetwork |  
Published : Jul 06, 2026, 01:30 AM IST
೫ಕೆಎಂಎನ್‌ಡಿ-೩ಮಂಡ್ಯದ ಅಶೋಕನಗರದಲ್ಲಿರುವ ಜೈ ಕರ್ನಾಟಕ ಸಭಾಂಗಣದಲ್ಲಿ ಜೈ ಕರ್ನಾಟಕ ಪರಿಷತ್ತು ವತಿಯಿಂದ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ.ಟಿ.ಟಿ.ಅನುಸೂಯ ಹೊಂಬಾಳೆ, ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದ ಮುಖ್ಯಸ್ಥೆ ಕೆ.ಪಿ.ಅರುಣಕುಮಾರಿ ಅವರಿಗೆ ರಾಜಮಾತೆ ಕೆಂಪನಂಜಮ್ಮಣ್ಣಿ ಪ್ರಶಸ್ತಿ  ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಚಾಮರಾಜೇಂದ್ರ ಒಡೆಯರ್ ಪತ್ನಿ ಕೆಂಪನಂಜಮ್ಮಣ್ಣಿ. ಒಡೆಯರ್ ಅವರು ಆಕಸ್ಮಿಕ ಕಾಯಿಲೆಗೆ ತುತ್ತಾದಾಗ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಇನ್ನೂ ಚಿಕ್ಕವರಾಗಿದ್ದರು. ಆದ ಕಾರಣ ಕೆಂಪನಂಜಮ್ಮಣ್ಣಿ ಅವರು ೧೮೯೫ರಿಂದ ೧೯೦೨ವರೆಗೆ ಮೈಸೂರು ಸಂಸ್ಥಾನದ ಆಡಳಿತದ ಚುಕ್ಕಾಣಿ ಹಿಡಿದಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ಮಹಾ ಸಂಸ್ಥಾನದ ಆಡಳಿತದಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ನಾಡಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಏಳು ವರ್ಷಕಾಲ ಜನಪರ ಆಡಳಿತ ನಡೆಸಿ ಚರಿತ್ರೆಯ ಪುಟ ಸೇರಿದ್ದಾರೆ. ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ಅರಮನೆಯ ಚಿನ್ನಾಭರಣವನ್ನೆಲ್ಲಾ ಒತ್ತೆ ಇಟ್ಟ ಮಹಾತಾಯಿ ಎಂದು ಸಾಹಿತಿ ಎಚ್.ಆರ್.ಕನ್ನಿಕ ಅಭಿಪ್ರಾಯಪಟ್ಟರು.

ಇಲ್ಲಿನ ಅಶೋಕ ನಗರದಲ್ಲಿರುವ ಜೈ ಕರ್ನಾಟಕ ಸಭಾಂಗಣದಲ್ಲಿ ಜೈ ಕರ್ನಾಟಕ ಪರಿಷತ್ತು ಮಂಡ್ಯ ಶಾಖೆಯಿಂದ ಆಯೋಜಿಸಿದ್ದ ಮೈಸೂರು ಮಹಾ ಸಂಸ್ಥಾನದ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ೧೬೦ನೇ ಜಯಂತ್ಯುತ್ಸವದ ಅಂಗವಾಗಿ ಕೆಂಪನಂಜಮ್ಮಣ್ಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಾಮರಾಜೇಂದ್ರ ಒಡೆಯರ್ ಪತ್ನಿ ಕೆಂಪನಂಜಮ್ಮಣ್ಣಿ. ಒಡೆಯರ್ ಅವರು ಆಕಸ್ಮಿಕ ಕಾಯಿಲೆಗೆ ತುತ್ತಾದಾಗ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಇನ್ನೂ ಚಿಕ್ಕವರಾಗಿದ್ದರು. ಆದ ಕಾರಣ ಕೆಂಪನಂಜಮ್ಮಣ್ಣಿ ಅವರು ೧೮೯೫ರಿಂದ ೧೯೦೨ವರೆಗೆ ಮೈಸೂರು ಸಂಸ್ಥಾನದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇಂಗ್ಲಿಷ್, ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಪಾಂಡಿತ್ಯ ಸಂಪಾದಿಸಿದ್ದ ಕೆಂಪನಂಜಮ್ಮಣ್ಣಿ ದೂರದೃಷ್ಟಿಯ ರಾಜಾಡಳಿತಕ್ಕೆ ಬುನಾದಿ ಹಾಕಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ-ಜನಪ್ರಿಯ ಆಡಳಿತಕ್ಕೆ ಆಸರೆಯಾದರು ಎಂದು ಸ್ಮರಿಸಿದರು.

ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ ೩೭೨ ಎಕರೆ ಭೂಮಿ ಮತ್ತು ಅಪಾರ ಧನ ಸಹಾಯ ನೀಡಿದರು. ಇವರ ಕಾಲದಲ್ಲಿ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಕೃಷ್ಣರಾಜಸಾಗರ ಅಣೆಕಟ್ಟೆ ಕಟ್ಟುವ ವೇಳೆ ಆರ್ಥಿಕ ಸಮಸ್ಯೆ ಎದುರಾದಾಗ ತಮ್ಮ ಬಳಿ ಇದ್ದ ಹಾಗೂ ಅರಮನೆಯ ಚಿನ್ನಾಭರಣವನ್ನೆಲ್ಲಾ ಒತ್ತೆ ಇಟ್ಟು ಅಣೆಕಟ್ಟು ಪೂರ್ಣಗೊಳ್ಳುವುದಕ್ಕೆ ನೆರವಾಗಿದ್ದನ್ನು ಎಂದಿಗೂ ಮರೆಯಲಾಗದು ಎಂದರು.

ಸಿಐಟಿಯು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ಚಿತ್ರದುರ್ಗದ ವಾಣಿ ವಿಲಾಸ ಸಾಗರ (ಮಾರಿ ಕಣಿವೆ) ಅಣೆಕಟ್ಟು ಕೆಂಪನಂಜಮ್ಮಣ್ಣಿ ಕಾಲದಲ್ಲಿ ನಿರ್ಮಾಣಗೊಂಡಿತು. ಜನರ ಆರೋಗ್ಯ ರಕ್ಷಣೆಯನ್ನು ಗುರಿಯಾಗಿಸಿಕೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಮೈಸೂರಿನಲ್ಲಿ ಕ್ಷಯರೋಗ ಆಸ್ಪತ್ರೆ ಸ್ಥಾಪನೆಗೆ ಕಾರಣರಾದರು ಎಂದು ಸ್ಮರಿಸಿದರು.

ವಿದ್ಯುತ್ ಯೋಜನೆಯಿಂದ ಮಂಡ್ಯ ಇಂಡಿಯಾಕ್ಕೆ ಪರಿಚಯವಾಯಿತು, ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯಾದ ಶಿವನಸಮುದ್ರ ಯೋಜನೆ ಇವರ ಕಾಲದಲ್ಲಿಯೇ ಕಾರ್ಯರೂಪಕ್ಕೆ ಬಂದಿತು ಎಂದರು.

ಜೈ ಕರ್ನಾಟಕ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್, ಮಹಿಳೆಯರು ತಾಯಿಯಾಗಬಹುದು, ಮಹಾತಾಯಿಯಾಗಲು ತ್ಯಾಗ ಮತ್ತು ದೂರದೃಷ್ಠಿಯ ನಾಯಕತ್ವ ಬೇಕು, ಅಂತ ಸಾಧನೆಯನ್ನು ಕೆಂಪನಂಜಮ್ಮಣ್ಣಿ ಮಾಡಿದ್ದಾರೆ ಎಂದು ನುಡಿದರು.

ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ.ಟಿ.ಟಿ.ಅನುಸೂಯ ಹೊಂಬಾಳೆ, ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದ ಮುಖ್ಯಸ್ಥೆ ಕೆ.ಪಿ.ಅರುಣಕುಮಾರಿ ಅವರಿಗೆ ರಾಜಮಾತೆ ಕೆಂಪನಂಜಮ್ಮಣ್ಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೌಟುಂಬಿಕ ಕಲಹ ಸಲಹೆಗಾರ್ತಿ ನಾಗರತ್ನಅರಸ್, ಇಂದಿರಾ ಕಾಲೋನಿ ಶಾಖೆಯ ಅಧ್ಯಕ್ಷೆ ತನುಜಾ, ಸವಿತಾ, ವಿವಿಧ ಶಾಖಾ ಅಧ್ಯಕ್ಷರು-ಪದಾಧಿಕಾರಿಗಳು ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯಲ್ಲಿ ನಿರಂತರ ಮಳೆ: ತುಂಗಾ ಡ್ಯಾಂ ಭರ್ತಿ
ಸೊರಬ, ಶಿಕಾರಿಪುರ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಿ