- ಮುಖಂಡರ ಸಮನ್ವಯ ಸಭೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಉಮೇಶ್ ಪಾಟೀಲ್ ಆಗ್ರಹ

ಕನ್ನಡಪ್ರಭ ವಾರ್ತೆ ಸೊರಬ

ಜಿಲ್ಲೆಯ ಸೊರಬ ಮತ್ತು ಶಿಕಾರಿಪುರ ತಾಲೂಕುಗಳು ಸತತ ಮಳೆ ವೈಫಲ್ಯದಿಂದ ನಲುಗಿದ್ದು ವಾಡಿಕೆಯಷ್ಟು ಮಳೆ ಬಿದ್ದಿಲ್ಲ. ಸರ್ಕಾರ ಕೂಡಲೇ ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಉಮೇಶ್ ಪಾಟೀಲ್ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತ ಮುಖಂಡರ ಜೊತೆ ಹಮ್ಮಿಕೊಂಡಿದ್ದ ಸಮನ್ವಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಗಾರು ಕ್ಷೀಣಿಸಿದ್ದರಿಂದ ರೈತರು ನಿರೀಕ್ಷೆಯಷ್ಟು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ ಪೂರ್ವ ಮುಂಗಾರಿಗೆ ಭೂಮಿ ಹದಗೊಳಿಸಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬಿಸಿಲಿಗೆ ಒಣಗಿ ಹೋಗಿದೆ. ಕೆಲವು ಭಾಗದಲ್ಲಿ ಮೆಕ್ಕೆಜೋಳ ಮೊಳಕೆಯೊಡೆಯುವ ಮುನ್ನವೇ ಕೆಂಪು ಬಣ್ಣಕ್ಕೆ ತಿರುಗಿ ಪೂರ್ಣ ಸುಟ್ಟಿದೆ. ಈ ಬಾರಿ ಶೇ.೭೦ರಷ್ಟು ಮಳೆ ಕೊರತೆ ಎದುರಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಸೊರಬ ಮತ್ತು ಶಿಕಾರಿಪುರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ತನ್ನು ಖಾಸಗೀಕರಣಗೊಳಿಸಲು ರೈತ ಸಂಘ ಬಿಡುವುದಿಲ್ಲ. ವಿದ್ಯುತ್ ಖಾಸಗೀಕರಣ ವಿರೋಧಿಸಿ ಸಾಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಗಮನಿಸಿ ಇಂಧನ ಸಚಿವ ಕೆ.ಜೆ. ಜಾರ್ಜ್ ಸರ್ಕಾರದ ಮುಂದೆ ವಿದ್ಯುತ್ ಖಾಸಗಿಕರಣ ಪ್ರಸ್ತಾಪವಿಲ್ಲ ಎಂದು ಹೇಳಿಕೆ ನೀಡಿದ್ದು ರೈತ ಸಂಘ ಸ್ವಾಗತಿಸುತ್ತದೆ ಎಂದರು.


ಕಾಂಗ್ರೆಸ್ ಸರ್ಕಾರ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಉಚಿತ ವಿದ್ಯುತ್ ನೀಡಿದೆ. ರೈತರಿಗೆ ಅನುಕೂಲವಾಗುವ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವುದು ಉತ್ತಮ. ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಜನರ ಒಳಿತಾಗಿ ಇರುವ ಇಲಾಖೆಗಳಾದ ಲೋಕೋಪಯೋಗಿ ಮತ್ತು ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಬಾರದು ಎಂದು ಅಂದೇ ಹೇಳಿದ್ದಾರೆ. ಸಾರ್ವಜನಿಕ ಸಂಸ್ಥೆಗಳ ಮೇಲೆ ಬಂಡವಾಳಶಾಹಿಗಳ ಕರಿನೆರಳು ಬೀಳದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ರೈತ ಸಂಘದ ಜಿಲ್ಲಾಧ್ಯಾಕ್ಷ ಮಂಜುನಾಥ ಆರೇಕೊಪ್ಪ, ತಾಲೂಕು ಅಧ್ಯಕ್ಷ ಸುಭಾಷಚಂದ್ರ ಜಿರಲೆಕೊಪ್ಪ, ಶಿಕಾರಿಪುರ ತಾಲೂಕು ಸಂಚಾಲಕ ಬಾಬಣ್ಣ, ಉಪಾಧ್ಯಕ್ಷ ಶೇಖರಪ್ಪ, ದಾನೇಶ್, ಸಾಗರ ಕಾರ್ಯಾಧ್ಯಕ್ಷ ಅಮೃತರಾಜ್ ಸಾಗರ, ನಾಗರಾಜ್, ಯುವರಾಜ್, ಅನುಸೂಯಾ, ರೇಖಾ, ಮಂಜುನಾಥ್ ಕೋಣನಮನೆ, ಮದನಕುಮಾರ್, ಚಂದ್ರು, ಕುಮಾರ್, ಗದಿಗೆಪ್ಪಗೌಡ, ಪ್ರೇಮ ಭರತ್ ಹಿರಿಯಾವಲಿ, ದಾನೇಶ್ ಇದ್ದರು.

- - -

-೦೫ಕೆಪಿಸೊರಬ-೦೧:

ಸೊರಬ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತ ಮುಖಂಡರ ಜೊತೆ ಹಮ್ಮಿಕೊಂಡಿದ್ದ ಸಮನ್ವಯ ಸಭೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಉಮೇಶ್ ಪಾಟೀಲ್ ಮಾತನಾಡಿದರು.