ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳೆಯರು ರಂಗೋಲಿ ಸ್ಪರ್ಧೆ, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ನಿಂಬೆಹಣ್ಣಿನ ಓಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಟೀ ಎಸ್‌ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ. ಕುಟುಂಬ ಜವಾಬ್ದಾರಿಗಳ ನಡುವೆಯೂ ಮಹಿಳೆಯರು ತಮ್ಮ ಆರೋಗ್ಯ, ಆತ್ಮವಿಶ್ವಾಸ ಹಾಗೂ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ. ಕ್ರೀಡೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುತ್ತವೆ. ಮಹಿಳೆಯರಲ್ಲಿ ಧೈರ್ಯ, ನಾಯಕತ್ವ ಹಾಗೂ ಪರಸ್ಪರ ಸಹಕಾರ ಮನೋಭಾವ ಬೆಳೆಸುತ್ತವೆ. ಜಾನಪದ ಗೀತೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಪಿಡಿಒ ಮುನಿವೆಂಕಟಸ್ವಾಮಿ ಮಾತನಾಡಿ, ಗ್ರಾಪಂ ವತಿಯಿಂದ ಮಹಿಳಾ ಸಬಲೀಕರಣ, ಆರೋಗ್ಯ, ಶಿಕ್ಷಣ, ಸ್ವಾವಲಂಬನೆ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮುಂದೆಯೂ ಆದ್ಯತೆ ನೀಡಲಾಗುವುದು. ಮಹಿಳೆಯರು ಸಂಘಟಿತರಾಗಿ ಗ್ರಾಮದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಗ್ಗಜಗ್ಗಾಟ, ಸಂಗೀತ ಕುರ್ಚಿ, ನಿಂಬೆಹಣ್ಣಿನ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷ ಆಕರ್ಷಣೆಯಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಪ್ರತಿಯೊಬ್ಬ ಮಹಿಳೆಯನ್ನೂ ಗೌರವಿಸುವ ಉದ್ದೇಶದಿಂದ ಸಮಾಧಾನಕರ ಬಹುಮಾನವಾಗಿ ಸೀರೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷೆ ರಾಣಿರಾಮಚಂದ್ರ, ಗ್ರಾಪಂ ಮಾಜಿ ಅಧ್ಯಕ್ಷೆ ಅಮ್ಮಯ್ಯಮ್ಮ, ಮುಖಂಡರಾದ ಸೊನ್ನೇಗೌಡ, ಸಿದ್ದಪ್ಪ, ಗ್ರಾಪಂ ಕಾರ್ಯದರ್ಶಿ ಶಿವಶಂಕರಪ್ಪ, ಕರ ವಸೂಲಿಗಾರ ಕೊಳತೂರು ಶ್ರೀನಿವಾಸ್ ಇತರರು ಭಾಗವಹಿಸಿದ್ದರು.


ಫೋಟೋ: 5 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕಿನ ವಾಗಟ ಗ್ರಾಮದಲ್ಲಿ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟದಲ್ಲಿ ವಿಜೇತ ಮಹಿಳೆಯರಿಗೆ ಟೀಮ್ ಎಸ್‌ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ಬಹುಮಾನ ವಿತರಿಸಿದರು.