ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆಯಿಂದ ಭಾನುವಾರ ಸ್ವಚ್ಛತೆ ಕೆಲಸದಲ್ಲಿ ತೊಡಗುವ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸುರಕ್ಷತಾ ಪರಿಕರಗಳನ್ನು ವಿತರಿಸಲಾಯಿತು.ನಗರಸಭೆಯ ಎಲ್ಲಾ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಗಮ್ ಬೂಟ್, ರೇಡಿಯಂ ಜಾಕೆಟ್, ಮಾಸ್ಕ್, ಗುದ್ದಲಿ, ಗೋರೋಮಣೆ, ಪೊರಕೆ, ಕತ್ತಿಗಳನ್ನು ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ಮಾರ್ಗದರ್ಶನದಂತೆ ನೀಡಲಾಯಿತು.
ಪೌರ ಕಾರ್ಮಿಕರು ಕಡ್ಡಾಯವಾಗಿ ಈ ಸುರಕ್ಷತಾ ಪರಿಕರಗಳನ್ನು ಉಪಯೋಗಿಸಬೇಕು. ಇವುಗಳನ್ನು ಧರಿಸುವುದರಿಂದ ಸ್ವಚ್ಛತೆ ಸಮಯದಲ್ಲಿ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಬಹುದು. ಪ್ರತಿಯೊಬ್ಬರೂ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸಿರಬೇಕು ಎಂದು ಯು.ಪಿ.ಪಂಪಾಶ್ರೀ ತಿಳಿಸಿದರು.ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತರ ರುದ್ರೇಗೌಡ, ಆರೋಗ್ಯ ನಿರೀಕ್ಷಕರಾದ ಜಿ.ಕೆ.ಅಶ್ವಥ್, ಶ್ರೀನಿವಾಸ್ ಇದ್ದರು.
ಮದ್ದೂರು ತಾಲೂಕಿನ ಸಮಸ್ಯೆ ಬಗ್ಗೆ ಗಮನ ಹರಿಸಿ: ವೆಂಕಟಾಚಲಯ್ಯ
ಮದ್ದೂರು:ಒಳಮೀಸಲಾತಿ ಆದೇಶದಂತೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಜಾತಿ ಪ್ರಮಾಣ ಪತ್ರ ನೀಡುವುದು ಕೆಲವು ಕಡೆ ವಿಳಂಬವಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶಾಲಾ ಕಾಲೇಜು ದಾಖಲಾತಿ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ದಲಿತ ಮುಖಂಡ ಅತಗೂರು ವೆಂಕಟಾಚಲಯ್ಯ ತಹಸೀಲ್ದಾರ್ ಗೆ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನೂತನ ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ತಾಲೂಕಿಗೆ ಬಂದಿರುವ ಶಿವಕುಮಾರ ಬಿರಾದಾರ ಅವರು ಒಳ್ಳೆಯ ಕೆಲಸಗಾರರು. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಗಮನ ಹರಿಸಬೇಕು. ಉತ್ತಮ ಕೆಲಸ ನಿರ್ವಹಿಸಲು ಸಹಕಾ ಇರುತ್ತದೆ ಎಂದರು.ನಂತರ ದಲಿತ ಸಾಹಿತ್ಯ ಪರಿಷತ್‌ನಿಂದ ಅಭಿನಂದಿಸಲಾಯಿತು. ಈ ವೇಳೆ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಸಹ ಕಾರ್ಯದರ್ಶಿ ರಾಚಯ್ಯ, ಬೂದಗುಪ್ಪೆ ಪುಟ್ಟಲಿಂಯ್ಯ, ಪ್ರಸನ್ನ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ಶಿವಣ್ಣ ಅಹಿಂದ ಸಂರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್ ಪಿ, ಚಿಕ್ಕಹೋಸಗಾವಿ ಅಪ್ಪಾಜಿ, ಸೋಮನಹಳ್ಳಿ ಮೋಹನ್, ಕೊಪ್ಪ ಶಿವಕುಮಾರ್, ಆಶಿಷ್ ಪಾಷಾ, ಚುನಾವಣೆ ಶಾಖೆಯ ರೂಪ, ನಗರ ಕೆರೆ ಬಸವಚಾರಿ, ಚಿಕ್ಕೋನಹಳ್ಳಿ ಗುರುಸಿದ್ಧಯ್ಯ ಹಾಗೂ ಇತರರು ಇದ್ದರು.