ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಪೊಲೀಸರ ಸುಳ್ಳು ಕೇಸುಗಳಿಗೆ, ಕಾಂಗ್ರೆಸ್ಸಿಗರ ಗೂಂಡಾಗಳಿಗೆ ಹೆದರುವವರಲ್ಲ. ಪ್ರತಿಭಟನೆಯ ಹಕ್ಕನ್ನು ಕಸಿದುಕೊಂಡು ಕಾನೂನನ್ನು ಕೈಗೆತ್ತಿಕೊಂಡಿರುವವರ ವಿರುದ್ಧ ಪೊಲೀಸರು ಕ್ರಮ ವಹಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದರು.ಮಳವಳ್ಳಿ ಚಲೋ ಪ್ರತಿಭಟನೆಗೆ ಪೊಲೀಸರಿಂದ ಅನುಮತಿ ಪಡೆಯಲಾಗಿತ್ತು. ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಮಯದಲ್ಲಿ ಕಾಂಗ್ರೆಸ್ ಗೂಂಡಾಗಳು ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸರ ಎದುರಿನಲ್ಲೇ ಹಲ್ಲೆ, ದೌರ್ಜನ್ಯ ನಡೆಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಜೂ.೨೯ರಂದು ಕೆಆರ್‌ಎಸ್ ಪಕ್ಷದ ತಾಲೂಕು ಪದಾಧಿಕಾರಿಗಳು ಪುರಸಭೆಗೆ ತೆರಳಿದ್ದಾಗ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಿರಲಿಲ್ಲ. ಸರ್ಕಾರ ನೀಡಿರುವ ಗುರುತಿನ ಕಾರ್ಡ್ ಹಾಕಿಕೊಳ್ಳದಿರುವುದನ್ನು ಪ್ರಶ್ನಿಸಿದ್ದಕ್ಕೆ ಹಾರಿಕೆ ಉತ್ತರ ನೀಡಿ, ಉದ್ಧಟತನದಿಂದ ವರ್ತಿಸಿ ಕಚೇರಿಯ ಗೇಟ್ ಬೀಗ ಹಾಕಿಸಿ ಪಕ್ಷದ ಕಾರ್ಯಕರ್ತರೆಲ್ಲರನ್ನೂ ಕೂಡಿಹಾಕಿದ್ದಾರೆ. ಎಲ್ಲಾ ನೌಕರರು ತಮ್ಮ ಕರ್ತವ್ಯ ಸ್ಥಗಿತಗೊಳಿಸಿದ್ದರು. ಪೊಲೀಸರು ಬಂದು ಗೇಟ್ ತೆಗೆಸಿದ ನಂತರ ಕೆಆರ್‌ಎಸ್ ಪಕ್ಷದವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸುಳ್ಳು ದೂರು ನೀಡಿ ಎಫ್‌ಐಆರ್ ಮಾಡಿಸಿದ್ದಾರೆ ಎಂದು ಆಪಾದಿಸಿದರು.ಸರ್ಕಾರಿ ನೌಕರರು ಪಕ್ಷದ ಪದಾಧಿಕಾರಿಗಳನ್ನು ಅಕ್ರಮ ಬಂಧನದಲ್ಲಿರಿಸಿರುವ ಬಗ್ಗೆ ದೂರು ನೀಡಲು ಹೋದರೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಅಧಿಕಾರಿಗಳ ಇಂತಹ ಉದ್ಧಟತನ, ದುರಾಡಳಿತ, ಭ್ರಷ್ಟಾಚಾರ, ಸುಳ್ಳು ದೂರು ದಾಖಲಿಸಿರುವುದನ್ನು ಮತ್ತು ನಮ್ಮ ದೂರನ್ನು ದಾಖಲಿಸದಿರುವುದರ ವಿರುದ್ಧ ಮಳವಳ್ಳಿ ಚಲೋ ಹಮ್ಮಿಕೊಳ್ಳಲಾಗಿತ್ತು ಎಂದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಸಿ.ಎನ್.ದೀಪಕ್, ಕಾರ್ಯಾಧ್ಯಕ್ಷ ಜಾಣಗೆರೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿ ತಾಲೂಕು ಕಚೇರಿ ತಲುಪಿದಾಗ ಅಲ್ಲಿ ಗುಂಪುಗೂಡಿದ್ದ ದುಷ್ಕರ್ಮಿಗಳು ಕಾರ್ಯಕರ್ತರಿಗೆ ಧಮಕಿ ಹಾಕಿ ಹಲ್ಲೆಗೆ ಮುಂದಾದರು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಗಲಭೆ, ದೊಂಬಿ ಸೃಷ್ಟಿಸುವ ದುರುದ್ದೇಶದಿಂದ ಅಲ್ಲಿ ಗುಂಪುಗೂಡಿದ್ದರು. ಅಕ್ರಮವಾಗಿ ಗುಂಪುಗೂಡಿದ್ದವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.
ನಂತರ ಶಾಂತಿ ಕಾಪಾಡುವ ಸಲುವಾಗಿ ಸ್ಥಳದಲ್ಲೇ ಪಕ್ಷದ ಪದಾಧಿಕಾರಿಗಳು ಕೂರಲು ಮುಂದಾದಾಗ ಅವರನ್ನು ಬಂಧಿಸಿ ಕಿರುಗಾವಲು ಠಾಣೆಗೆ ಎಳೆದೊಯ್ದರು ಎಂದು ವಿವರಿಸಿದರು.
ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಪಕ್ಷದ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿದರು.ಗೋಷ್ಠಿಯಲ್ಲಿ ಅರುಣ್‌ಕುಮಾರ, ಮಹದೇವಮ್ಮ, ಮಲ್ಲೇಶ್, ರಮೇಶ್‌ಗೌಡ, ಕೆಂಪಮ್ಮ, ದೀಪಿಕಾ, ಮಹದೇವಸ್ವಾಮಿ ಇತರರಿದ್ದರು.