ಕನ್ನಡಪ್ರಭ ವಾರ್ತೆ ತುರುವೇಕೆರೆ
ಜೀವನದಲ್ಲಿ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿದರೆ ಮಾತ್ರ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಸುನಿಲ್ ಬಾಬು ಹೇಳಿದರು.ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ ನಲ್ಲಿ ಲಯನ್ಸ್ ಕ್ಲಬ್ ವತಿಯಿಂದ 2026- 27ನೇ ಸಾಲಿನ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಾನು ಬಡತನದ ಕಷ್ಟಗಳೇನು ಎಂಬುದನ್ನು ಬಲ್ಲೆ. ಅದನ್ನೂ ಎದೆಗುಂದದೆ ಎದುರಿಸಿದ್ದೇನೆ. ಮನುಷ್ಯನಿಗೆ ಜೀವನದಲ್ಲಿ ಕಷ್ಟ- ಸುಖಗಳು ಬರುತ್ತವೆ, ಹೋಗುತ್ತವೆ. ಆದರೆ ಕಷ್ಟ ಬಂದ ಸಂದರ್ಭದಲ್ಲಿ ಎದೆಗುಂದದೆ ಧೈರ್ಯವಾಗಿ ಎದುರಿಸಬೇಕು. ಆಗ ಮಾತ್ರ ಯಶಸ್ಸು ಗಳಿಸಲು ಮತ್ತು ಸಾಧನೆ ಮಾಡಲು ಸಾಧ್ಯ ಎಂದರು.
ತಮ್ಮ ಯಶಸ್ಸಿಗೆ ಸಹಕರಿಸಿದ ಕುಟುಂಬ ವರ್ಗ, ಸ್ನೇಹಿತರನ್ನು ಮರೆಯಲು ಸಾಧ್ಯವಿಲ್ಲ. ದುಡಿದ ಹಣದಲ್ಲಿ ಸ್ವಲ್ಪ ಭಾಗ ಸಮಾಜ ಸೇವೆಗೆ ಮೀಸಲಿಡಲಿದ್ದೇನೆ. ಲಯನ್ಸ್ ಕ್ಲಬ್ ನ ಎಲ್ಲ ಸದಸ್ಯರ ಸಹಕಾರದೊಂದಿಗೆ ಈ ವರ್ಷ ತಾಲೂಕಿನಲ್ಲಿ ಉತ್ತಮ ಸೇವಾ ಕಾರ್ಯಕ್ರಮ ಮಾಡಲು ಮುಂದಾಗಿದ್ದೇವೆ ಎಂದರು.ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಪಟ್ಟಣದ ಲಯನ್ಸ್ ಕ್ಲಬ್ ಉತ್ತಮ ಸೇವಾ ಕಾರ್ಯಕ್ರಮ ಮಾಡುತ್ತಿದೆ. ಒಂದು ವರ್ಷದಲ್ಲಿ ಸುನಿಲ್ ಬಾಬು ತಂಡ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲಿ ಎಂದು ಹಾರೈಸಿದರು.
ಸಂಸ್ಥೆಯ ಮಾಜಿ ಜಿಲ್ಲಾ ರಾಜ್ಯಪಾಲ ಡಾ.ನಾಗರಾಜ್ ರಾವ್, ನೂತನ ಅಧ್ಯಕ್ಷರು ಮತ್ತು ಪದಾದಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಈ ಸಂದರ್ಭದಲ್ಲಿ ನೂತನ ಸದಸ್ಯರಾಗಿ ವೆಂಕಟಾಪುರ ಯೋಗೀಶ್, ಸಂತೋಷ್ ಕಂಟ್ಲಿ ಸೇರಿ ಹಲವರು ಸೇರ್ಪಡೆಯಾದರು. ಕಾರ್ಯಕ್ರಮಕ್ಕೆ ಆಗಮಿಸಿದ ಓರ್ವ ದಂಪತಿಗೆ ಲಾಟರಿ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲಾಯಿತು. ರೋಟರಿ ಕ್ಲಬ್ ಸೇರಿ ವಿವಿಧ ಸಂಘ ಸಂಸ್ಥೆಗಳ ಪದಾದಿಕಾರಿಗಳು, ಅಭಿಮಾನಿಗಳು, ಮುಖಂಡರು, ಹಿತೈಷಿಗಳು ಆಗಮಿಸಿ ನೂತನ ತಂಡಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಪ್ರಾಂತ್ಯಾಧ್ಯಕ್ಷ ಎಚ್.ಎಸ್.ಮಹೇಶ್, ಕಲ್ಪತರು ಲಯನ್ಸ್ ಚಾರಿಟಬಲ್ ಅಧ್ಯಕ್ಷ ಡಾ.ಚೌದ್ರಿ ನಾಗೇಶ್, ವಲಯಾಧ್ಯಕ್ಷ ಕೆ.ಲೋಕೇಶ್, ನಿರ್ಗಮಿತ ಅಧ್ಯಕ್ಷ ಎಚ್.ಎನ್.ಪರಮೇಶ್ವರ ಸ್ವಾಮಿ, ಕಾರ್ಯದರ್ಶಿ ಡಾ.ಎ.ನಾಗರಾಜು, ಖಜಾಂಚಿ ಸುನಿಲ್ ಕುಮಾರ್, ಸ್ವಾಗತ ಸಮಿತಿ ಅಧ್ಯಕ್ಷ ಟಿ.ವಿ.ಮಹೇಶ್, ನೂತನ ಕಾರ್ಯದರ್ಶಿ ಎಸ್.ವಿ.ರವಿ, ಖಜಾಂಚಿ ಕೆ.ಎನ್.ಆನಂದ್ ಸೇರಿ ಲಯನ್ಸ್ ಪದಾಧಿಕಾರಿಗಳು ಇದ್ದರು.