ಭಾರತದ ಇತಿಹಾಸದಲ್ಲಿ ಅತ್ಯಂತ ಅಪರೂಪದ ರಾಜಕಾರಣಿ, ಮುತ್ಸದ್ದಿ ಹಾಗೂ ಸನ್ಯಾಸಿಯಾಗಿದ್ದ ಸ್ವಾಮಿ ರಾಮಾನಂದ ತೀರ್ಥರ ಕೊಡುಗೆಗಳು ಅನನ್ಯವಾಗಿದ್ದು, ಹೈದರಾಬಾದ್ ಸಂಸ್ಥಾನದ ವಿಮೋಚನೆಯಲ್ಲಿ ಅವರ ಪಾತ್ರ ಇತಿಹಾಸದ ಪುಟಗಳಲ್ಲಿ ದಾಖಲಾರ್ಹವಾಗಿದೆ ಎಂದು ಕಲಬುರಗಿಯ ಪತ್ರಕರ್ತರು ಹಾಗೂ ಸಾಹಿತಿ ಶ್ರೀನಿವಾಸ ಸಿರನೂರಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಭಾರತದ ಇತಿಹಾಸದಲ್ಲಿ ಅತ್ಯಂತ ಅಪರೂಪದ ರಾಜಕಾರಣಿ, ಮುತ್ಸದ್ದಿ ಹಾಗೂ ಸನ್ಯಾಸಿಯಾಗಿದ್ದ ಸ್ವಾಮಿ ರಾಮಾನಂದ ತೀರ್ಥರ ಕೊಡುಗೆಗಳು ಅನನ್ಯ ವಾಗಿದ್ದು, ಹೈದರಾಬಾದ್ ಸಂಸ್ಥಾನದ ವಿಮೋಚನೆಯಲ್ಲಿ ಅವರ ಪಾತ್ರ ಇತಿಹಾಸದ ಪುಟಗಳಲ್ಲಿ ದಾಖಲಾರ್ಹವಾಗಿದೆ ಎಂದು ಕಲಬುರಗಿಯ ಪತ್ರಕರ್ತರು ಹಾಗೂ ಸಾಹಿತಿ ಶ್ರೀನಿವಾಸ ಸಿರನೂರಕರ್ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಕನ್ನಡ ಭವನದಲ್ಲಿ ಕಸಾಪ ಜಿಲ್ಲಾ, ತಾಲೂಕು ಸಮಿತಿ ಹಾಗೂ ರಾಯಚೂರಿನ ವಿಮಲಾಭಾಯಿ ಭಗತರಾಜ ನಿಜಾಮಕಾರಿ ಪ್ರತಿಷ್ಠಾನ ಇವರುಗಳ ಜಂಟಿ ಆಶ್ರಯದಲ್ಲಿ 2026-27ನೇ ಸಾಲಿನ ಶಿವುಬಾಯಿ ತುಳಜಾರಾಮ್ ನಿಜಾಮಕಾರಿ ದತ್ತಿ ಉಪನ್ಯಾಸ ಮತ್ತು ಚೆನ್ನಣ್ಣ ವಾಲೀಕಾರ ವಿರಚಿತ ‘ಚಿಗರೆ ಆಕ್ರಂದನ’ ಕವನ ಸಂಕಲನದ ಜನಾರ್ಪಣೆ ಮತ್ತು ‘ಸ್ವಾತಂತ್ರ್ಯ ಹೋರಾಟದ ಬಂಡಾಯಗಾರ ಸ್ವಾಮಿ ರಮಾನಂದ ತೀರ್ಥ’ ಎಂಬ ವಿಷಯದ ಕುರಿತು ದತ್ತಿ ಉಪನ್ಯಾಸದಲ್ಲಿ ಭಾನುವಾರ ಮಾತನಾಡಿ, ಸ್ವಾಮಿ ರಾಮಾನಂದ ತೀರ್ಥರು ತಮ್ಮ 27ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಅವರು, ಸಮಾಜದ ಏಳಿಗೆ ಮತ್ತು ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು ಇಷ್ಟೇ ಅಲ್ಲದೇ ಕಾರ್ಮಿಕ, ಶಿಕ್ಷಣ, ಭೂ ಸುಧಾರಣೆ ಹಾಗೂ ಹೈದರಾಬಾದ್ ವಿಮೋಚನೆ ಹೋರಾಟದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ,ಇಂದಿನ ಯುವ ಪೀಳಿಗೆಯು ಮೊಬೈಲ್ ವ್ಯಾಮೋಹದಿಂದ ಹೊರಬಂದು, ಇಂತಹ ಮೌಲ್ಯಯುತ ಉಪನ್ಯಾಸಗಳನ್ನು ಆಲಿಸುವ ಮೂಲಕ ಗ್ರಂಥಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ ಹೈದರಾಬಾದ್ ಕರ್ನಾಟಕ ಭಾಗದ ಕೆಪಿಎಸ್‌ಸಿ ಹೋರಾಟ, ನೀರಾವರಿ ಸಮಸ್ಯೆಗಳು ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ವಿರುದ್ಧ ವಾಲೀಕಾರ್ ಅವರು ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದರು. ಅವರ ಹೋರಾಟದ ಹಾದಿ ನಮಗೆಲ್ಲರಿಗೂ ಪ್ರೇರಣೆಯಾಗಿದೆ. ಡಾ. ಚನ್ನಣ್ಣ ವಾಲೀಕಾರ್ ಅವರ ಪತ್ನಿ ಸಿದ್ದಮ್ಮ ತಾಯಿ ಅವರ ಬಳಿ ವಾಲೀಕಾರ್ ಅವರು ಬರೆದಿಟ್ಟಿರುವ ಇನ್ನೂ ಕನಿಷ್ಟ ೩೦ಕ್ಕೂ ಹೆಚ್ಚು ಅಮೂಲ್ಯವಾದ ಕೈಬರಹದ ಹಸ್ತಪ್ರತಿಗಳು (ಗ್ರಂಥಗಳು) ಲಭ್ಯವಿದ್ದು, ಅವುಗಳನ್ನು ಹೊರತರುವ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯ ಪ್ರಜ್ಞಾವಂತರು ಇದಕ್ಕೆ ಕೈಜೋಡಿಸಬೇಕಾಗಿದೆ ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ಕಲಬುರಗಿಯ ಚೆನ್ನಣ್ಣ ವಾಲೀಕಾರ ಅವರ ಧರ್ಮಪತ್ನಿ ಶ್ರೀಮತಿ ಸಿದ್ದಮ್ಮ ವಾಲೀಕಾರ ಅವರು ಚೆನ್ನಣ್ಣ ವಾಲೀಕಾರ ಅವರ "ಚಿಗರೆ ಆಕ್ರಂದನ " ಕವನ ಸಂಕಲನವನ್ನು ಜನಾರ್ಪಣೆಗೊಳಿಸಿದರು.
ನಂತರ ಚೆನ್ನಣ್ಣ ವಾಲೀಕಾರ ಅವರ ‘ಚಿಗರೆ ಆಕ್ರಂದನ’ ಕವನ ಸಂಕಲನ ಕುರಿತು ವಿಶ್ರಾಂತ ಪ್ರಾಂಶುಪಾಲ ಇಂದಿರಾ ಆರ್. ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಕನ್ನಡ ವಿಕಾಸ ರಂಗದ ಅಧ್ಯಕ್ಷ ಭೀಮನಗೌಡ ಇಟಗಿ, ಭಾಬು ಭಂಡಾರಿಗಲ್, ಕಸಾಪ ತಾಲೂಕಾಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ,ಸದಸ್ಯರು, ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಇದ್ದರು. ರಾವುತರಾವ್ ಬರೂರ, ಪ್ರತಿಭಾ ಗೋನಾಳ, ವೈಶಾಲಿ ಪಾಟೀಲ್, ಶಾಂತಾ ಕುಲಕರ್ಣಿ ನಿರ್ವಹಿಸಿದರು.