ನರಸಿಂಹರಾಜಪುರ10 ರಿಂದ 19 ವರ್ಷದ ಒಳಗಿನ ಶೇ. 50 ರಷ್ಟು ಮಕ್ಕಳು ಸದಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಶಿವಮೊಗ್ಗದ ಪಾಸಿಟೀವ್ ಮೈಂಡ್ ಆಸ್ಪತ್ರೆ ಮಾನಸಿಕ ತಜ್ಞೆ ವೈದ್ಯೆ ಡಾ. ಐಶ್ವರ್ಯ ತಿಳಿಸಿದರು.
- ಸೈಂಟ್ ಜೋಸೆಫ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ10 ರಿಂದ 19 ವರ್ಷದ ಒಳಗಿನ ಶೇ. 50 ರಷ್ಟು ಮಕ್ಕಳು ಸದಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಶಿವಮೊಗ್ಗದ ಪಾಸಿಟೀವ್ ಮೈಂಡ್ ಆಸ್ಪತ್ರೆ ಮಾನಸಿಕ ತಜ್ಞೆ ವೈದ್ಯೆ ಡಾ. ಐಶ್ವರ್ಯ ತಿಳಿಸಿದರು.
ಶನಿವಾರ ಎಲ್.ಎಫ್.ಚಚ್‌ರ್ ಸಭಾಂಗಣದಲ್ಲಿ ಜೋಸೆಫ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆರೋಗ್ಯ ಎಂದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಚೆನ್ನಾಗಿರಬೇಕು. ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಮೂಡುತ್ತದೆ. ಪ್ರಪಂಚದಲ್ಲಿ ಪ್ರತಿ ದಿನ 13 ಸಾವಿರ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಪೋಷಕರು ತಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.ಅತಿಥಿಯಾಗಿದ್ದ ಪೊಲೀಸ್ ಠಾಣಾಧಿಕಾರಿ ಡಿ.ಇ.ನೂತನ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಪೋಷಕರು ಮನೆಯಲ್ಲೂ ಮಕ್ಕಳ ಬಗ್ಗೆ ಗಮನ ನೀಡಬೇಕು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಜೊತೆ ಪೋಷಕರ ಜವಾಬ್ದಾರಿಯೂ ಇದೆ ಎಂದರು. ಸೈಂಟ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ಮೋಹನ್ ಮಾತನಾಡಿ ವಿದ್ಯೆಯಾರೂ ಕದಿಯಲಾಗದ ಸಂಪತ್ತು. ನಮ್ಮ ಶಾಲೆ ಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಅಂತರ್ ಜಿಲ್ಲಾ ಪ್ರೌಢ ಶಾಲೆಗಳ ಸ್ಪರ್ಧೆಯಲ್ಲಿ ಸೃಜನಾತ್ಮಕ ಕಥೆ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕು. ರೆನಿಶಾ ಹಾಗೂ ಅಂತರ್ ಜಿಲ್ಲಾ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕು. ಹರ್ಷ ಅವರನ್ನು ಅತಿಥಿಗಳು ಗೌರವಿಸಿದರು. ಮಾನಸಿಕ ತಜ್ಞೆ ಡಾ.ಐಶ್ವರ್ಯ ಹಾಗೂ ಪೊಲೀಸ್ ಠಾಣಾಧಿಕಾರಿ ಡಿ.ಇ. ನೂತನ್ ಅವರನ್ನು ಸನ್ಮಾನಿಸಲಾಯಿತು.ಸಭೆ ಅಧ್ಯಕ್ಷತೆಯನ್ನು ದೀಪ್ತಿ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿ ಅಧ್ಯಕ್ಷ ಫಾ.ಟಿನೋ ವಹಿಸಿದ್ದರು. ಅತಿಥಿಗಳಾಗಿ ಆಡಳಿತಾಧಿಕಾರಿ ಜೋಸೆಫ್, ಉಪಾಧ್ಯಕ್ಷ ಡೇವಿಸ್ ಎ.ಜೆ, ಕಾರ್ಯದರ್ಶಿ ಇ.ಸಿ.ಜೋಯಿ, ಆಡಳಿತ ಮಂಡಳಿ ಸದಸ್ಯರಾದ ಪ್ರಜ್ವಲ್, ಬಿನು, ಎಲ್.ಎಫ್ ಚರ್ಚ್ ಟ್ರಸ್ಟಿ ಬೇಬಿ ಇದ್ದರು.
ನಂತರ ಶಿವಮೊಗ್ಗದ ಮಾನಸಿಕ ತಜ್ಞೆ ಡಾ.ಐಶ್ವರ್ಯ ಮಕ್ಕಳು ಹಾಗೂ ಪೋಷಕರೊಂದಿಗೆ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಸಂವಾದ ನಡೆಸಿದರು.