ಕೆಂಪೇಗೌಡರು ಎಲ್ಲರಿಗೂ ಮಾದರಿ: ಎಡಿಸಿ ದುರುಗೇಶ್‌

KannadaprabhaNewsNetwork | Published : Jun 28, 2024 12:47 AM

ಸಾರಾಂಶ

ಇಂದು ಕನ್ನಡ ನಾಡಿನ ಪಾಲಿಗೆ ಒಂದು ಶುಭದಿನ. ಬೆಂಗಳೂರಿನಂತಹ ಮಹಾನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ ಜನ್ಮದಿನವಿದು. ಇದನ್ನು ಸರ್ಕಾರವೇ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಬೆಂಗಳೂರಿನ ಜನಕನನ್ನು ಸ್ಮರಿಸುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಜೀವನ ಮತ್ತು ಸಾಧನೆ ಎಲ್ಲರಿಗೂ ಮಾದರಿಯಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಹೇಳಿದರು.

ಸ್ಥಳೀಯ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ರಾಯಚೂರು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಕನ್ನಡ ನಾಡಿನ ಪಾಲಿಗೆ ಒಂದು ಶುಭದಿನ. ಬೆಂಗಳೂರಿನಂತಹ ಮಹಾನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ ಜನ್ಮದಿನವಿದು. ಇದನ್ನು ಸರ್ಕಾರವೇ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಬೆಂಗಳೂರಿನ ಜನಕನನ್ನು ಸ್ಮರಿಸುತ್ತಿದೆ. ಈ ಮೂಲಕ, ಕೆಂಪೇಗೌಡರ ವೈಭವದ ಪರಂಪರೆಯನ್ನು ಹೊಸ ತಲೆಮಾರುಗಳಿಗೆ ವರ್ಗಾಯಿಸುವ ಕೆಲಸವೂ ಆಗುತ್ತಿದೆ ಎಂದರು.

ಉಪನ್ಯಾಸಕಿ ರೆಡ್ಡಿ ಪ್ರೇಮಲತಾ ಮಾತನಾಡಿ, ಸುಮಾರು 500 ವರ್ಷಗಳಷ್ಟು ಹಿಂದೆಯೇ ವ್ಯಾಪಾರಿಗಳನ್ನು ಕರೆತಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರವರ ವೃತ್ತಿಗಳಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟು ಬೆಂಗಳೂರು ಬೆಳೆಯಲು ಅನುವು ಮಾಡಿಕೊಟ್ಟ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಆವರು ನಿರ್ಮಿಸಿದ ಈ ಎಲ್ಲಾ ಪೇಟೆಗಳು ಇಂದಿಗೂ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಭಾರಿ ಮಹತ್ವವನ್ನೊಂದಿವೆ ಎಂದರು.

ರಾಜಧಾನಿಯ ಕೋಟೆ ನಿರ್ಮಾಣದ ಜೊತೆಗೆ ಕೆಂಪೇಗೌಡರು ಸುಮಾರು 64 ಪೇಟೆಗಳನ್ನು ನಿರ್ಮಿಸಿದರೆಂದು ತಿಳಿದುಬರುತ್ತದೆ. ಇವುಗಳಲ್ಲಿ 54 ಪೇಟೆಗಳ ಹೆಸರುಗಳು ಮಾತ್ರ ಇತಿಹಾಸಕಾರರಿಗೆ ಲಭ್ಯವಾಗಿವೆ. ಪೇಟೆಯ ಹೆಸರುಗಳನ್ನಾಧರಿಸಿ ಗೌಡರು ನಿರ್ಮಿಸಿದ ಪೇಟೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ ಎಂದರು.

ಈ ವೇಳೆ ರಾಯಚೂರು ತಹಸೀಲ್ದಾರ್ ಸುರೇಶ್ ವರ್ಮ ಮಾತನಾಡಿ, ಕೆಂಪೇಗೌಡರ ಗುರುತಿನ ಸಾಧನೆಯೇ ಬೆಂಗಳೂರು ನಗರವಾಗಿದ್ದು, ಜನ ಸಾಮಾನ್ಯರು ಇವರ ಆಳ್ವಿಕೆಯನ್ನು ನೋಡಿ ಪ್ರಜಾವತ್ಸಲ ಎಂಬ ಬಿರುದನ್ನು ನೀಡಿದ್ದಾರೆ. ಅಲ್ಲದೆ ಕೆಂಪೇಗೌಡರು ಎಂದ ತಕ್ಷಣ ನಮಗೆ ನೆನಪಾಗುವುದು ಬೆಂಗಳೂರು ನಿರ್ಮಾತೃ ಎಂಬುವುದಾಗಿ ಹೇಳಿದರು.

ಇದಕ್ಕೂ ಮೊದಲು ನಗರದ ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದಿಂದ ರಂಗಮಂದಿರದವರೆಗೆ ಮೆರೆವಣಿಗೆ ಮಾಡಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ರಾಯಚೂರು ಸಹಾಯಕ ಆಯುಕ್ತರಾದ ಮೈಬೂಬಿ, ಸಾಹಿತಿ ಬಾಬುರಾವ್ ಸೇರಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಇದ್ದರು.

Share this article