ಕನ್ನಡಪ್ರಭ ವಾರ್ತೆ ಆಲೂರು
ಸಮಾಜದಲ್ಲಿನ ಎಲ್ಲಾ ಜನಾಂಗದ ವೃತ್ತಿ ಆಧರಿತ ಬಡವರು, ದೀನ ದಲಿತರು ತಮ್ಮ ಜೀವನವನ್ನು ರೂಪಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರು ನಗರವನ್ನು ನಿರ್ಮಿಸಿದ ಮಹಾನ್ ನಾಯಕ ನಾಡಪ್ರಭು ಕೆಂಪೇಗೌಡರು ಕಾರಣಕರ್ತರು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡರು ಕೇವಲ ಒಂದು ಸಮಾಜಕ್ಕೆ ಹಾಗೂ ವರ್ಗಕ್ಕೆ ಸೀಮಿತರಾದವರಲ್ಲ, ಅವರು ಸರ್ವ ವ್ಯಾಪಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದ ಮುಖಂಡರುಗಳನ್ನು ಕರೆದು ಜಾತ್ಯತೀತವಾಗಿ ಈ ಕಾರ್ಯಕ್ರಮವನ್ನು ಮಾಡುತ್ತಿರುವುದು ಒಂದು ಅರ್ಥಗರ್ಭಿತವಾದ ಸಮಾರಂಭವಾಗಿದೆ. 500 ವರ್ಷಗಳ ಹಿಂದೆಯೇ ಭವಿಷ್ಯದ ದೂರ ದೃಷ್ಟಿಯಿಂದ ನಗರದಲ್ಲಿ 1500 ಕೆರೆ ಕಟ್ಟೆಗಳನ್ನ ನಿರ್ಮಿಸಿ ನೀರಿನ ದಾಹ ಇಂಗಿಸಿದ ಖ್ಯಾತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಇಂದು ಗ್ರೇಟರ್ ಬೆಂಗಳೂರು, ಬ್ರಾಂಡ್ ಬೆಂಗಳೂರು, ಬೃಹತ್ ಬೆಂಗಳೂರು ಎಂದು ನಾವು ಬೆಂಗಳೂರಿಗೆ ಹೇಳುತ್ತಿದ್ದು, ಬೆಂಗಳೂರಿಗೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟವರು ನಾಡಪ್ರಭು ಕೆಂಪೇಗೌಡರು. ಅಂದು ಅವರು ಬೆಂಗಳೂರನ್ನು ನಿರ್ಮಿಸದೇ ಇದ್ದೀದ್ದರೆ ಬೆಂಗಳೂರಿಗೆ ಈ ಹೊಸ ಹೆಸರುಗಳನ್ನು ಇಡಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ನಮ್ಮ ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ ಸುಮಾರು ಒಂದುವರೆ - ಎರಡು ಕೋಟಿ ಜನರು ತಮ್ಮ ಜೀವನೋಪಾಯಕ್ಕಾಗಿ ಬೆಂಗಳೂರು ನಗರವನ್ನು ಆಶ್ರಯಿಸಿದ್ದಾರೆ. ಇಂತಹ ಬೆಂಗಳೂರು ನಗರವನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರು ಎಲ್ಲರಿಗೂ ಎಲ್ಲ ಜನಾಂಗಕ್ಕೂ ಸಮುದಾಯಕ್ಕೂ ಕೂಡ ಆದರ್ಶವಾಗಿದ್ದಾರೆ ಎಂದರು. ಶಾಸಕ ಸಿಮೆಂಟ್ ಮಂಜು ಮಾತನಾಡಿ, ಅಧಿಕಾರ ಯಾರಿಗೂ ಕೂಡ ಶಾಶ್ವತವಲ್ಲ ಆದರೆ ಕೆಂಪೇಗೌಡರು ತಮ್ಮ ಅಧಿಕಾರದಲ್ಲಿದ್ದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದು ಇಂದು ಇಡೀ ವಿಶ್ವವೇ ಬೆಂಗಳೂರಿನ ಕಡೆ ತಿರುಗಿ ನೋಡುವಂತೆ ಆ ನಾಡನ್ನು ನಿರ್ಮಿಸಿದಂತಹ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು. ಬೆಂಗಳೂರು ಬಳಿಯ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಈ ಪ್ರತಿಮೆಯ ಉದ್ಘಾಟನೆಗೆ ಪ್ರಧಾನ ಮಂತ್ರಿ ಶ ನರೇಂದ್ರ ಮೋದಿ ಆಗಮಿಸಿದ್ದಾರೆ ಎಂದರೆ ಕೆಂಪೇಗೌಡರ ಶೌರ್ಯ, ವ್ಯಕ್ತಿತ್ವ, ಕೊಡುಗೆ ಹಾಗೂ ಕೆಂಪೇಗೌಡರು ಮಾಡಿದ ಸಾಧನೆಗೆ ಹಿಡಿದ ಕೈಗನ್ನಡಿ ಎಂದರು.ಮಾಜಿ ಸಚಿವ ಎಚ್ ಕೆ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ರಚಿಸುವ ಯಾವುದೇ ಪಕ್ಷವಿರಲಿ ಕೆಂಪೇಗೌಡರ ಆಡಳಿತವನ್ನು ಮಾದರಿಯಾಗಿಟ್ಟುಕೊಂಡು ಬಡವರ ದೀನದಲಿತರ ಮಧ್ಯಮ ವರ್ಗದವರ ಏಳಿಗೆಗೆ ಶ್ರಮಿಸಬೇಕು ಎಂದರು. ಇವರ ಆದರ್ಶವನ್ನು ಇಟ್ಟುಕೊಂಡು ಸರ್ಕಾರಗಳು ಆಡಳಿತ ಮಾಡುವಂತೆ ಸಲಹೆ ನೀಡಿದರು.
ಮುಖ್ಯ ಭಾಷಣಕಾರ ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, 1420ರಿಂದ 1730ರವರೆಗೆ ಒಟ್ಟು 10 ಜನ ಸಾಮಂತರು ಬೆಂಗಳೂರು ಸಾಮ್ರಾಜ್ಯವನ್ನು ಆಳಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೆಂಪೇಗೌಡರು ಬೆಂಗಳೂರು ನಗರವನ್ನು ಅಭಿವೃದ್ಧಿ ಹಾಗೂ ದೂರ ದೃಷ್ಟಿಯಿಂದ ನಿರ್ಮಾಣ ಮಾಡಿದ್ದಾರೆ. ಅವರ ದೂರ ದೃಷ್ಟಿಯ ನಿರ್ಮಾಣದಿಂದ ಬೆಂಗಳೂರು ಇಂದು ಬೃಹತ್ ನಗರವಾಗಿ ಬೆಳೆದಿದ್ದು ಪ್ರತಿಯೊಬ್ಬರು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕೆಂಪೇಗೌಡರವರ ಪ್ರತಿಮೆಯನ್ನು ಬೆಳ್ಳಿ ಸಾರೋಟಿನಲ್ಲಿ ವೀರಗಾಸೆ, ನಂದಿದ್ವಜ, ಕರಡೇ ವಾದ್ಯ, ನಾಸಿಕ್ ಡೋಲ್ ಹಾಗೂ ಡಿಜೆ ಸಂಗೀತದೊಂದಿಗೆ ವೀರಶೈವ ಕಲ್ಯಾಣ ಮಂಟಪದಿಂದ ಒಕ್ಕಲಿಗರ ಸಮುದಾಯ ಭವನದವರೆಗೆ ನಡೆಸಲಾಯಿತು.ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು, ಮಾಜಿ ಸಚಿವ ಎಚ್ ಕೆ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್ ಪಿ ಮೋಹನ್, ಪ್ರಭಾರ ತಹಸೀಲ್ದಾರ್ ಮೋಹನ್ ಕುಮಾರ್, ಸುಬ್ರಮಣ್ಯ ಶರ್ಮ, ಬಿಇಒ ಕೃಷ್ಣೇಗೌಡ, ಮಲ್ಲೇಶ್, ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ಕೆ ಎಸ್ ಮಂಜೇಗೌಡ, ಖಜಾಂಚಿ ಶಾಂತಕೃಷ್ಣ, ತಾ.ವೀರಶೈವ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ಅಧ್ಯಕ್ಷ ಅಜಿತ್, ಜಿಲ್ಲಾ ಹಿಂದುಳಿದ ವರ್ಗಗಳ ಮುಖಂಡ ಬಿ ಸಿ ಶಂಕರಾಚಾರ್, ಮುಖ್ಯ ಭಾಷಣಕಾರ ಹಂಪನಲ್ಲಿ ತಿಮ್ಮೇಗೌಡ, ದಲಿತ ಮುಖಂಡರಾದ ವೆಂಕಟಯ್ಯ, ಗೇಕರವಳ್ಳಿ ಬಸವರಾಜು, ಭದ್ರಯ್ಯ, ಕಸಾಪ ಮಾಜಿ ಅಧ್ಯಕ್ಷ ಗುಲಾಂ ಸತ್ತಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.