ಕನ್ನಡಪ್ರಭ ವಾರ್ತೆ ತುಮಕೂರುಇಂದಿನ ಬೆಂಗಳೂರು ನಗರ ಉದ್ಯಾನನಗರಿ, ಸ್ವಚ್ಛನಗರಿ, ಸಿಲಿಕಾನ್ ಸಿಟಿ, ಕೂಲ್ ಸಿಟಿ, ಐಟಿಬಿಟಿ ಸಿಟಿ ಎಂದೆಲ್ಲಾ ವಿಶ್ವಮನ್ನಣೆ ಪಡೆಯಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿತ್ವವೇ ಕಾರಣವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯ ಹುತ್ರಿದುರ್ಗ, ದೇವರಾಯನ ದುರ್ಗ ಸೇರಿ ರಾಜ್ಯದ 16 ಪ್ರದೇಶಗಳಲ್ಲಿ ದುರ್ಗಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ತಿಳಿಸಿದರು.ಕೇಂಪೇಗೌಡರು ಮಹಾನ್‌ಪುರುಷ:
ವಿದ್ಯಾರ್ಥಿಗಳು, ಯುವ ಜನಾಂಗ ಇವರ ಸಾಧನೆಯ ಸೂತ್ರಗಳನ್ನು ಹಾಗೂ ನಾಡಿನ ಅಭಿವೃದ್ಧಿಗೆ ನೀಡಿರುವ ಅದ್ವಿತೀಯ ಕೊಡುಗೆಗಳನ್ನು ತಿಳಿದುಕೊಂಡು ಅವರ ಮೌಲ್ಯಯುತ ಗುಣವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ದೇಶದ 4ನೇ ಅತಿ ದೊಡ್ಡ ನಗರವೆಂದು ಗುರುತಿಸಿಕೊಂಡಿರುವ ರಾಜ್ಯದ ರಾಜಧಾನಿ ಬೆಂಗಳೂರು ನಗರದಿಂದ ರಾಜ್ಯಕ್ಕೆ ಶೇ.80ರಷ್ಟು ರಾಜಸ್ವ ನೇರವಾಗಿ ಬರುತ್ತಿದೆ. ಇಡೀ ರಾಜ್ಯ ಅಭಿವೃದ್ಧಿಗೆ ಈ ರಾಜಸ್ವವನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಜನರ ಬದುಕಿಗೆ ಆರ್ಥಿಕ ಶಕ್ತಿ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಅಕ್ಕಿಪೇಟೆ, ರಾಗಿಪೇಟೆ, ಮಂಡಿಪೇಟೆ, ಬಳೆಪೇಟೆ ಸೇರಿದಂತೆ ಮತ್ತಿತರ ಪೇಟೆಗಳನ್ನು ನಿರ್ಮಿಸಿದ್ದಾರೆ. ಈ ಪೇಟೆಗಳು ಇಂದಿಗೂ ರಾಜಧಾನಿಯಲ್ಲಿ ಎಲ್ಲಾ ವರ್ಗದ ಶಾಪಿಂಗ್ ಕೇಂದ್ರವಾಗಿರುವುದು ನಾವಿಲ್ಲಿ ಸ್ಮರಿಸಬಹುದು ಎಂದು ತಿಳಿಸಿದರು. ಇವರ ಸಾಧನೆ ಯುವಪೀಳಿಗೆಗೆ ಆಶಾಕಿರಣ:
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೆಂಪೇಗೌಡರ ಅದ್ವಿತೀಯ ಸಾಧನೆಗಳು ಇಂದಿಗೂ ಯುವ ಪೀಳಿಗೆಗೆ ಆಶಾಕಿರಣವಾಗಿವೆ. ಗ್ರಾಮ ನಿಮಾಣ ಮಾಡುವುದೇ ಕಷ್ಟಸಾಧ್ಯವಾಗಿರುವಾಗ ಬೆಂಗಳೂರಿನಂತಹ ಮಹಾನಗರದ ಸೃಷ್ಟಿಗೆ ಕಾರಣಕರ್ತರಾದ ಕೆಂಪೇಗೌಡರ ಯೋಜನೆಗಳು ಸದಾ ಸ್ಮರಿಸುವಂತಹದು. ಕೆಂಪೇಗೌಡರು ಸುಮಾರು ೪೫೦ ವರ್ಷಗಳ ಹಿಂದೆಯೇ ಸರ್ವರಿಗೂ ಸಮಾನ ಅವಕಾಶ, ಕುಡಿಯುವ ನೀರು, ಕಲೆ, ವಾಸ್ತು ಶಿಲ್ಪ, ಸಾಂಸ್ಕೃತಿಕ ಆಚರಣೆ, ದೇವಾಲಯ ಸೇರಿದಂತೆ ಹಲವು ರೀತಿಯಲ್ಲಿ ಸಮಾನತೆ ಕಲ್ಪಿಸಿಕೊಟ್ಟಿದ್ದರು ಎಂದು ಮಾರ್ಮಿಕ ನುಡಿಗಳನ್ನಾಡಿದರು. ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿದರು.ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಗೋವಿಂದರಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಡಿಡಿಪಿಐ ಕೆ.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ, ಲಕ್ಷ್ಮಿರಂಗಯ್ಯ, ವಿವಿಧ ಮುಖಂಡರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಗಣ್ಯರಿಂದ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕೆಂಪೇಗೌಡರ ಸಾಧನೆ ಕುರಿತು ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಗಳನ್ನು ನೀಡಲಾಯಿತು.