ತಮ್ಮ ಸ್ನೇಹಿತ ಪೊಲೀಸ್ ಕಾನ್‌ಸ್ಟೇಬಲ್‌ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಯಮ ಉಲ್ಲಂಘಿಸಿ ನಟ ದರ್ಶನ್ ಅವರನ್ನು ಭೇಟಿ ಮಾಡಿಸಿದ ತಪ್ಪಿಗೆ ಕಾರಾಗೃಹದ ವಾರ್ಡನ್‌ವೊಬ್ಬರು ವರ್ಗಾವಣೆಗೊಂಡಿದ್ದಾರೆ.

ಬೆಂಗಳೂರು : ತಮ್ಮ ಸ್ನೇಹಿತ ಪೊಲೀಸ್ ಕಾನ್‌ಸ್ಟೇಬಲ್‌ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಯಮ ಉಲ್ಲಂಘಿಸಿ ನಟ ದರ್ಶನ್ ಅವರನ್ನು ಭೇಟಿ ಮಾಡಿಸಿದ ತಪ್ಪಿಗೆ ಕಾರಾಗೃಹದ ವಾರ್ಡನ್‌ವೊಬ್ಬರು ವರ್ಗಾವಣೆಗೊಂಡಿದ್ದಾರೆ.

ವಾರ್ಡನ್ ಪ್ರಭುಚೌವ್ಹಾಣ್ ಎತ್ತಂಗಡಿ ಆಗಿದ್ದು, ಇತ್ತೀಚೆಗೆ ಸ್ನೇಹಿತನ ಕೋರಿಕೆ ಮೇರೆಗೆ ಆತನಿಗೆ ದರ್ಶನ್‌ರನ್ನು ಭೇಟಿ ಮಾಡಿಸಿದ್ದರು. ಈ ಭೇಟಿ ವಿಡಿಯೋವನ್ನು ವೀಕ್ಷಿಸಿದ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು, ಕರ್ತವ್ಯಲೋಪದ ಆರೋಪದ ಮೇರೆಗೆ ಪ್ರಭು ಚವ್ಹಾಣ್ ಅವರನ್ನು ಚಾಮರಾಜನಗರ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಲವು ದಿನಗಳಿಂದ ಯಲಹಂಕ ಠಾಣೆ ಕಾನ್‌ಸ್ಟೇಬಲ್ ಗಣೇಶ್ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ವಾರ್ಡನ್‌ ಪ್ರಭು ಸ್ನೇಹಿತರು. ಇತ್ತೀಚೆಗೆ ಅಪರಾಧ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಗಳನ್ನು ಜೈಲಿಗೆ ಬಿಡಲು ಗಣೇಶ್ ಬಂದಿದ್ದರು. ಆಗ ತಮ್ಮ ಸ್ನೇಹಿತನಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಿಸುವಂತೆ ಕಾನ್‌ಸ್ಟೇಬಲ್ ಕೋರಿದ್ದಾರೆ.

ಸಿಟಿಟೀವಿ ನೋಡಿ ವಿಚಾರಣೆ:

ಈ ಮನವಿಗೆ ಒಪ್ಪಿದ ಪ್ರಭು, ನಿಯಮ ಉಲ್ಲಂಘಿಸಿ ದರ್ಶನ್ ಅವರ ಸೆಲ್‌ಗೆ ಕರೆದೊಯ್ದು ಭೇಟಿ ಮಾಡಿಸಿದ್ದಾರೆ. ಕೆಲ ನಿಮಿಷ ದರ್ಶನ್ ಕುಶಲೋಪರಿ ವಿಚಾರಿಸಿ ಗಣೇಶ್ ಮರಳಿದ್ದಾರೆ. ತಮ್ಮ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿಗಳಿಂದ ದರ್ಶನ್ ಸೆಲ್‌ಗೆ ಖಾಕಿ ಸಮವಸ್ತ್ರದಲ್ಲಿದ್ದ ಸಿಬ್ಬಂದಿ ಭೇಟಿಯನ್ನು ಡಿಜಿಪಿ ಅಲೋಕ್ ಕುಮಾರ್ ವೀಕ್ಷಿಸಿದ್ದರು. ಆಗ ಆ ಸಿಬ್ಬಂದಿ ಬಗ್ಗೆ ಅನುಮಾನ ಮೂಡಿದೆ. ಬಳಿಕ ಗಣರಾಜ್ಯೋತ್ಸವ ನಿಮಿತ್ತ ಜೈಲಿಗೆ ತೆರಳಿದ್ದಾಗ ದರ್ಶನ್‌ಗೆ ತಮ್ಮ ಭೇಟಿಗೆ ಬಂದಿದ್ದವರ ಬಗ್ಗೆ ಡಿಜಿಪಿ ವಿಚಾರಿಸಿದ್ದಾರೆ. ಆಗ ತಮಗೆ ಪರಿಚಯದವರಲ್ಲ. ಬಂದು ಹಾಯ್ ಹೇಳಿದರು. ನಾನು ಮಾತನಾಡಿಸಿದೆ ಅಷ್ಟೇ ಎಂದಿದ್ದಾರೆ. ಆಗ ವಾರ್ಡನ್‌ ಪ್ರಭುರನ್ನು ಕರೆಸಿ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ.

ಡಿಜಿಪಿ ಕೊಠಡಿಯಲ್ಲೇ ಮಿನಿ ಕಮಾಂಡರ್ ಸೆಂಟರ್

ಡಿಜಿಪಿ ಅಲೋಕ್ ಕುಮಾರ್ ಅವರ ಕಚೇರಿಯಲ್ಲೇ ಮಿನಿ ಕಮಾಂಡರ್ ಸೆಂಟರ್ ಸ್ಥಾಪಿಸಲಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸಂಪರ್ಕಿಸಿ ಕಲ್ಪಿಸಲಾಗಿದೆ. ಈಗ ತಮ್ಮ ಕಚೇರಿಯಲ್ಲೇ ಕುಳಿತು ಕಾರಾಗೃಹದ ಚಟುವಟಿಕೆಗಳ ಮೇಲೆ ಅವರು ನಿಗಾವಹಿಸಿದ್ದಾರೆ.