ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ನಟ ಸುದೀಪ್ ಅಭಿಮಾನಿಗಳು ಎನ್ನಲಾದ ಸಾಫ್ಟ್‌ವೇರ್ ಎಂಜಿನಿಯರ್‌ ಸೇರಿ ಇಬ್ಬರನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

- ಬಂಧಿತರು ಕಿಚ್ಚನ ಫ್ಯಾನ್ಸ್‌? । ಇನ್ನೂ 16 ಮಂದಿಗೆ ಬೇಟೆ

- ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಟೀಕೆ ಬೆನ್ನಲ್ಲೇ ಬಂಧನ

--- ‘ಮಾರ್ಕ್‌’ ಸಿನಿಮಾದ ಬಿಡುಗಡೆಪೂರ್ವ ಕಾರ್ಯಕ್ರಮ ವೇಳೆ ಯುದ್ಧ ಪದ ಬಳಸಿದ್ದ ಸುದೀಪ್‌

- ಅದಕ್ಕೆ ದಾವಣಗೆರೆಯಲ್ಲಿ ತಿರುಗೇಟು ನೀಡಿದ್ದ ವಿಜಯಲಕ್ಷ್ಮಿ ದರ್ಶನ್‌. ಅವರ ಹೇಳಿಕೆ ಸಂಚಲನ

- ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್‌ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕೆಲ ಕಿಡಿಗೇಡಿಗಳು

- ಆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ವಿಜಯಲಕ್ಷ್ಮಿ. ಯಾರೊಬ್ಬರ ಬಂಧನವಾಗದ್ದಕ್ಕೆ ಆಕ್ರೋಶ

- ಇದರ ಬೆನ್ನಲ್ಲೇ ಇಬ್ಬರನ್ನು ಬಂಧಿಸಿದ ಪೊಲೀಸರು. ಇನ್ನೂ 16 ಮಂದಿಗೆ ತೀವ್ರ ಶೋಧ ಕಾರ್ಯ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ನಟ ಸುದೀಪ್ ಅಭಿಮಾನಿಗಳು ಎನ್ನಲಾದ ಸಾಫ್ಟ್‌ವೇರ್ ಎಂಜಿನಿಯರ್‌ ಸೇರಿ ಇಬ್ಬರನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮ್ಮ ದೂರಿಗೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ವಿಜಯಲಕ್ಷ್ಮೀ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇಬ್ಬರು ಕಿಡಿಗೇಡಿಗಳನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದ್ದಾರೆ.

ದಾವಣಗೆರೆಯ ಸಾಫ್ಟ್‌ವೇರ್ ಎಂಜಿನಿಯರ್ ನಿತಿನ್ ಹಾಗೂ ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರಶೇಖರ್ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇನ್ನೂ 16 ಮಂದಿ ಸೆರೆಗೆ ಸಿಸಿಬಿ ಬೇಟೆ ಮುಂದುವರೆಸಿದೆ.

ಇತ್ತೀಚೆಗೆ ದಾವಣಗೆರೆಯಲ್ಲಿ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಪ್ರಚಾರದ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು, ‘ಕೆಲವರು ದರ್ಶನ್‌ ಎದುರಿಗೆ ಇಲ್ಲದಾಗ ಅವರ ಬಗ್ಗೆ, ಅಭಿಮಾನಿಗಳ ಬಗ್ಗೆ ಏನೇನೋ ಮಾತನಾಡುತ್ತಾರೆ. ದರ್ಶನ್‌ ಇದ್ದಾಗ ಈ ವ್ಯಕ್ತಿಗಳು ಬೆಂಗಳೂರಿನಲ್ಲಿ ಇದ್ದಾರೋ, ಮಾಯ ಆಗಿದ್ದಾರೋ ಗೊತ್ತೇ ಆಗಲ್ಲ. ಇಂಥವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು’ ಎಂದು ಹೇಳಿಕೆ ನೀಡಿದ್ದರು. ಅಂದು ಅವರ ಮಾತಿಗೆ ಪ್ರತಿಕ್ರಿಯೆಯಾಗಿ ನಟ ಸುದೀಪ್ ಅಭಿಮಾನಿಗಳು ಎನ್ನಲಾದ ಕೆಲವರು ಅಶ್ಲೀಲ ಸಂದೇಶ ಕಳುಹಿಸಿ ನಿಂದಿಸಿದ್ದರು. ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವಿಜಯಲಕ್ಷ್ಮೀ ದೂರು ನೀಡಿದ್ದರು. ಅದರನ್ವಯ ಇನ್‌ಸ್ಟಾಗ್ರಾಂ ತಾಣದ 18 ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಾಯಿತು. ಆದರೆ ಪ್ರಕರಣ ದಾಖಲಾಗಿ ವಾರ ಕಳೆದರೂ ಆರೋಪಿಗಳ ಬಂಧನವಾಗದೆ ಹೋದಾಗ ವಿಜಯಲಕ್ಷ್ಮೀ ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಕಂಪನಿಯಲ್ಲಿ ನಿತಿನ್ ಉದ್ಯೋಗದಲ್ಲಿದ್ದರೆ, ಆಟೋ ಓಡಿಸಿಕೊಂಡು ಚಂದ್ರಶೇಖರ್ ಜೀವನ ಸಾಗಿಸುತ್ತಿದ್ದ. ಈ ಇಬ್ಬರು ನಟ ಸುದೀಪ್ ಕಟ್ಟಾ ಅಭಿಮಾನಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.