ಜಯಲಕ್ಷ್ಮೀ ವಿಲಾಸ ಅರಮನೆ ಸಂರಕ್ಷಣಾ ಕಾರ್ಯ ವೀಕ್ಷಿಸಿದ ಯುಎಸ್ ಕನ್ಸಲೇಟ್ ಪ್ರತಿನಿಧಿ

| Published : Dec 13 2024, 12:47 AM IST

ಜಯಲಕ್ಷ್ಮೀ ವಿಲಾಸ ಅರಮನೆ ಸಂರಕ್ಷಣಾ ಕಾರ್ಯ ವೀಕ್ಷಿಸಿದ ಯುಎಸ್ ಕನ್ಸಲೇಟ್ ಪ್ರತಿನಿಧಿ
Share this Article
  • FB
  • TW
  • Linkdin
  • Email

ಸಾರಾಂಶ

ಡೆಕ್ಕನ್ ಹೆರಿಟೇಜ್ ಸಂಸ್ಥೆಯು ಸುಮಾರು 33 ಕೋಟಿ ವೆಚ್ಚದಲ್ಲಿ ಇದರ ಸಂರಕ್ಷಣಾ ಕಾರ್ಯ ಕೈಗೊಂಡಿದ್ದು, ಈ ಕಟ್ಟಡದ ಪಶ್ಚಿಮ ಭಾಗಕ್ಕೆ ಯುಎಸ್ ಕನ್ಸಲೇಟ್ 2.4 ಕೋಟಿ ರು. ನೀಡಿದ್ದು, ಈ ಯೋಜನೆಯು 2025ರ ಡಿಸೆಂಬರ್ಗೆ ಅಂತ್ಯಗೊಳ್ಳಲಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಜಯಲಕ್ಷ್ಮೀವಿಲಾಸ ಮ್ಯಾನಷನ್ ಮತ್ತು ಜಾನಪದ ವಸ್ತು ಸಂಗ್ರಹಾಲಯದ ಸಂರಕ್ಷಣೆಯ ಹೊಣೆ ಹೊತ್ತಿರುವ ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಆಫ್ ಇಂಡಿಯಾ ಮತ್ತು ಯುಎಸ್ ಕನ್ಸಲೇಟ್ನ ಪ್ರತಿನಿಧಿಗಳು ಗುರುವಾರ ಭೇಟಿ ನೀಡಿ ಸಂರಕ್ಷಣಾ ಕಾರ್ಯವನ್ನು ಪರಿಶೀಲಿಸಿದರು.

ಡೆಕ್ಕನ್ ಹೆರಿಟೇಜ್ ಸಂಸ್ಥೆಯು ಸುಮಾರು 33 ಕೋಟಿ ವೆಚ್ಚದಲ್ಲಿ ಇದರ ಸಂರಕ್ಷಣಾ ಕಾರ್ಯ ಕೈಗೊಂಡಿದ್ದು, ಈ ಕಟ್ಟಡದ ಪಶ್ಚಿಮ ಭಾಗಕ್ಕೆ ಯುಎಸ್ ಕನ್ಸಲೇಟ್ 2.4 ಕೋಟಿ ರು. ನೀಡಿದ್ದು, ಈ ಯೋಜನೆಯು 2025ರ ಡಿಸೆಂಬರ್ಗೆ ಅಂತ್ಯಗೊಳ್ಳಲಿದೆ.

ಯುಎಸ್ ಕನ್ಸಲೇಟ್ ಅವರು ದೇಶದಲ್ಲಿ ಒಟ್ಟು 11 ಸಾವಿರ ಸಂರಕ್ಷಣಾ ಕಾರ್ಯ ಮಾಡುತ್ತಿದ್ದು, 2.7 ಮಿಲಿಯನ್ ಡಾಲರ್ ಹಣ ಹೂಡಿಕೆ ಮಾಡುತ್ತಿದೆ ಎಂದು ಪಬ್ಲಿಕ್ ಡಿಪ್ಲಮಸಿ ಅಫೈರ್ನ ರಾಯಭಾರಿ ಜಿಯಾನ್ ಬ್ರಿಗಾಂಟಿ ತಿಳಿಸಿದರು.

ಭಾರತದ ಯುಎಸ್ ಮಿಷನ್ಮತ್ತು ಅದರ ಅನುಷ್ಠಾನ ಪಾಲುದಾರರಾದ ಮೈಸೂರು ವಿಶ್ವವಿದ್ಯಾನಿಲಯವು ಮೈಸೂರಿನ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್ನ ಜಾನಪದ ವಸ್ತುಸಂಗ್ರಹಾಲಯಕ್ಕಾಗಿ ಯುಎಸ್ ಅನುದಾನಿತ ಸಂರಕ್ಷಣಾ ಕಾರ್ಯ ಆರಂಭಿಸಿದೆ.

ಭಾರತದಲ್ಲಿ ನಮ್ಮ ಸಂಸ್ಥೆಯು 23 ಯೋಜನೆ ಕೈಗೊಂಡಿದ್ದು, ಇದು ಎರಡನೇ ದೊಡ್ಡ ಯೋಜನೆಯಾಗಿದೆ. ಜಯಲಕ್ಷ್ಮೀ ವಿಲಾಸ ಅರಮನೆಯ ಪಶ್ಚಿಮ ಭಾಗದಲ್ಲಿ ಸುಮಾರು ಶೇ. 60 ರಷ್ಟು ಸಂರಕ್ಷಣಾ ಕಾರ್ಯ ಪೂರ್ಣವಾಗಿದೆ. ಕಟ್ಟಡದ ಮೂಲ ಮಾದರಿಯಂತೆಯೇ ಸಂರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕೆ ನಾವು ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಸ್ನೇಹ, ಸೌಹಾರ್ಧತೆ ಗಟ್ಟಿಕೊಳಿಸುವಲ್ಲಿ ಇಂತಹ ಯೋಜನೆಗಳು ನೆರವಾಗಲಿದೆ. ಅಲ್ಲದೆ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರಕಿದಂತೆ ಆಗುತ್ತದೆ ಎಂದರು.

ಸಾವಿರಾರು ವಸ್ತುಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ಕಟ್ಟಡದ ಮೇಲ್ಛಾವಣಿಯ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಸಂರಕ್ಷಣೆ ಹೊಣೆ ಹೊತ್ತಿರುವ ಡೆಕ್ಕನ್ ಹೆರಿಟೇಜ್ ಬೆಂಗಳೂರಿನ ಯುಟಿಸಿ, ಮೈಸೂರಿನ ಓರಿಯಂಟಲ್ ಕಟ್ಟಡದ ಸಂರಕ್ಷಣೆ ಕಾರ್ಯ ಮಾಡಿದೆ ಎಂದರು.

ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ನಾಗರಾಜ್ ಮಾತನಾಡಿ, ಇಲ್ಲಿನ ವಸ್ತು ಸಂಗ್ರಹಾಲಯಕ್ಕೆ ಸಾರ್ವಜನಿಕರು ಮತ್ತು ಲೇಖಕರ ಕೊಡುಗೆ ಅಪಾರವಾದದ್ದು. ನಾಡಿನ ಹಿರಿಯ ಲೇಖಕರ ಅನೇಕ ವಸ್ತುಗಳನ್ನು ತಾವೇ ಖುದ್ದಾಗಿ ಮತ್ತು ಉಚಿತವಾಗಿ ಸಂರಕ್ಷಣೆಗಾಗಿ ತಂದು ನೀಡಿದ್ದಾರೆ. ನಾವೂ ಕೂಡ ಅನೇಕ ವಸ್ತುಗಳನ್ನು ಸಂಗ್ರಹಿಸಿ ಇರಿಸಿರುವುದಾಗಿ ಹೇಳಿದರು.

ನಮಗೆ ಸಂರಕ್ಷಣಾ ಕಾರ್ಯದ ಸಮಯದಲ್ಲಿ ಕೆಲಸಗಾರರ ಸಮಸ್ಯೆ ಎದುರಾಗಿದ್ದು ಹೊರತುಪಡಿಸಿದರೆ ಬೇರೆ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಮೈಸೂರು ವಿವಿಯು ಇವರಿಗೆ ಪೂರ್ಣ ಪ್ರಮಾಣದ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯಿಂದ ಹೆಚ್ಚು ನೆರವಾಗಲಿದೆ. ನಮ್ಮ ಪಾರಪಂರಿಕ ವಸ್ತುಗಳ ಬಗ್ಗೆ ಮತ್ತು ಕಟ್ಟಡಗಳ ಕುರಿತು ಎರಡೂ ರಾಷ್ಟ್ರಗಳ ಯುವಕರಲ್ಲಿ ಜಾಗೃತಿ ಮೂಡಿಸಲು ಮತ್ತು ಪರಂಪರೆ ತಿಳಿಯುವಂತೆ ಮಾಡಲು ಇದು ನೆರವಾಗಲಿದೆ ಎಂದರು.

ಜಯಲಕ್ಷ್ಮೀವಿಲಾಸದ ಮೇಲುಸ್ತುವಾರಿ ಡಾ. ಗುರುಸಿದ್ದಯ್ಯ. ಎಂಜಿನಿಯರ್ ಅಖಿಲಾ ಮೊದಲಾದವರು ಇದ್ದರು.