ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣದಿಂದಾಗಿ ಎಚ್ಚೆತ್ತ ಪೊಲೀಸರು ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಹೆಚ್ಚಿನ ಜನರು ಈ ಕಡೆ ಸುಳಿಯಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮತ್ತೊಂದೆಡೆ ನೆರೆದಿದ್ದವರಿಗೂ ಕೂಡ ಸಂಭ್ರಮಾಚರಣೆಯಲ್ಲಿ ಹೆಚ್ಚಾಗಿ ಭಾಗವಹಿಸಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಜನರನ್ನು ನಿಲ್ಲಲು ಬಿಡಲಿಲ್ಲ. ಒಮ್ಮೆ ಈ ರಸ್ತೆಗಳಿಗೆ ಎಂಟ್ರಿಯಾದವರು 3 ಕಿಲೋ ಮೀಟರ್‌ಗಳವರೆ ಹೋಗಿ ಎಕ್ಸಿಟ್‌ ಆಗಬೇಕಿತ್ತು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಗೊಂದಲ ಉಂಟಾಗಿತ್ತು.

ಸರಿಯಾದ ಆಗಮನ ಮತ್ತು ನಿರ್ಗಮನ ವ್ಯವಸ್ಥೆ ಇಲ್ಲದಿದ್ದರಿಂದ ಜನರು ಏಕಮುಖವಾಗಿಯೇ ಹೋಗಬೇಕಾಯಿತು. ಮತ್ತೆ ಕೆಲವರನ್ನು ಇಲ್ಲಿನ ರಸ್ತೆಗೆ ಬರಲು ಪೊಲೀಸರು ಬಿಡಲಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಈ ಸುಖಕ್ಕೆ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ಗೆ ಏಕೆ ಬರಬೇಕಿತ್ತು ಎಂಬ ಪ್ರಶ್ನೆಯನ್ನು ನೆಟ್ಟಿಗರು ಎತ್ತಿದ್ದಾರೆ. ಈ ಬಾರಿ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆಗೆ ಬಂದವರ ಅನುಭವ ಯಾವುದೋ ಜಾತ್ರೆಗೆ ಹೋಗಿ ಬಂದಂತೆ ಆಯಿತು ಅಷ್ಟೇ. ಕಳೆದ ಬಾರಿಯಂತೆ ಸಂಭ್ರಮಾಚರಣೆಗೆ ಆಸ್ಪದವೇ ಇರಲಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ಕ್ರಮದ ಹೆಸರಿನಲ್ಲಿ ನಮ್ಮ ಸಂಭ್ರಮಾಚರಣೆಯನ್ನು ಕಿತ್ತುಕೊಂಡರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಹಾಕಿ ಟ್ರೋಲ್‌:

ಕೆಲವರು ಸಾಮಾಜಿಕ ಜಾಲತಾಣದಲ್ಲಿ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ಸ್ಟ್ರೀಟ್‌ಗಳಲ್ಲಿನ ವಿಡಿಯೋ ಹಾಕಿ ಸುಮ್ಮೆ ಜಾತ್ರೆಗೆ ಹೋಗಿ ಬಂದಂತೆ ಆಯ್ತು ಎಂದು ಟ್ರೋಲ್‌ಗಳನ್ನು ಮಾಡಿದ್ದಾರೆ.