ಜಿಲ್ಲಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಜನತೆ ಬರಮಾಡಿಕೊಂಡರು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಕುಟುಂಬದವರು, ಗೆಳೆಯರೊಂದಿಗೆ ಸೇರಿ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಹಾವೇರಿ: ಜಿಲ್ಲಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಜನತೆ ಬರಮಾಡಿಕೊಂಡರು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಕುಟುಂಬದವರು, ಗೆಳೆಯರೊಂದಿಗೆ ಸೇರಿ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಬುಧವಾರ ಸಂಜೆಯಿಂದಲೇ ಅನೇಕರು ಹೊಸ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಂಡು ಹಾಡು, ನೃತ್ಯ ಮಾಡುತ್ತ ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಸೇರಿ ಕಳೆದರು. ಕೆಲವು ಕಡೆ ಮಹಿಳೆಯರು, ಮಕ್ಕಳಾದಿಯಾಗಿ ಓಣಿಯ ಜನರೆಲ್ಲ ಸೇರಿ ಮನರಂಜನಾ ಚಟುವಟಿಕೆ ಮಾಡಿ, ಸಹ ಭೋಜನ ಸವಿಯುತ್ತ ಸಂಭ್ರಮಿಸಿದರು. ರಾತ್ರಿ 12 ಗಂಟೆಯಾಗುತ್ತಿದ್ದಂತೆ ಪಟಾಕಿ ಸಿಡಿಸುತ್ತ ಸಂಭ್ರಮಿಸಿದರು. ರಸ್ತೆ ಮಧ್ಯೆ, ಮನೆ ಎದುರು 2026ನೇ ವರ್ಷಕ್ಕೆ ಸ್ವಾಗತ ಕೋರುವ ರಂಗೋಲಿ ಇಟ್ಟು ಮಹಿಳೆಯರು ಸಾಂಪ್ರದಾಯಿಕ ರೀತಿಯಲ್ಲಿ ಹೊಸ ವರ್ಷ ಸ್ವಾಗತಿಸಿದರು. ಸಿಹಿ ತಿನಿಸಿ ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಭ್ರಮಾಚರಣೆಯಲ್ಲಿ ಯುವಕರ ಜೋಶ್‌ ಜೋರಾಗಿತ್ತು.

ಬಾರ್‌ ಮತ್ತು ರೆಸ್ಟೋರೆಂಟ್‌, ಖಾಸಗಿ ತೋಟದ ಮನೆಗಳಲ್ಲಿ ಎಣ್ಣೆಪ್ರಿಯರು ರಾತ್ರಿಯಿಡಿ ಮದ್ಯ ಸೇವಿಸುತ್ತ, ಹರಟೆ ಹೊಡೆಯುತ್ತ ಸಂಭ್ರಮಿಸಿದರು. ಈ ಸಲ ಪೊಲೀಸ್‌ ಬಂದೋಬಸ್ತ್‌ ಪ್ರತಿ ಸಲಕ್ಕಿಂತ ತುಸು ಹೆಚ್ಚು ಬಿಗಿಯಾಗಿಯೇ ಇತ್ತು. ಇದರಿಂದ ವೈನ್‌ ಶಾಪ್‌, ಹೋಟೆಲ್‌ಗಳು ನಿಗದಿತ ಸಮಯಕ್ಕೆ ಬಾಗಿಲು ಹಾಕಿದವು. ರಸ್ತೆ ಮೇಲೆ ಕೇಕೇ ಹಾಕುತ್ತ, ಕರ್ಕಷವಾಗಿ ಬೈಕ್‌ ಹಾರ್ನ್ ಮಾಡುತ್ತ ತಿರುಗುವ ಪುಂಡರ ಹಾವಳಿಯೂ ಕಡಿಮೆಯಿತ್ತು.

ಗುರುವಾರ ಬೆಳಗ್ಗೆ ಅನೇಕರು ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿದರು.