Kempegowda is worthy of visionary and capable leadership: Dr. K. Sudhakar
ಕೆಂಪೇಗೌಡರು ಸಮರ್ಥ ಹಾಗೂ ದೂರದರ್ಶಿತ್ವವುಳ್ಳ ನಾಯಕರು. ಆದರ್ಶ. ಜನಸ್ನೇಹಿ ಹಾಗೂ ಉತ್ತಮ ಆಡಳಿತದ ಮೂಲಕ ಬಹುವರ್ಗದ ಆಶೋತ್ತರಗಳಿಗೆ ಸ್ಪಂದಿಸಿ ಸಶಕ್ತ ನಾಡು ಕಟ್ಟಿದ ನಾಯಕ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಇಲ್ಲಿನ ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿಯಿಂದ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ 517ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಕುವೆಂಪು ಅವರ ವಿಶ್ವಮಾನವ ಸಂದೇಶ ಸಾರುವ ಮುನ್ನ, 500 ವರ್ಷದ ಹಿಂದೆಯೇ ಅದನ್ನು ಪಾಲಿಸುವ ಮೂಲಕ ಎಲ್ಲಾ ಜಾತಿ ವರ್ಗದವರನ್ನು ಸಮಾಜದ ಮನ್ನೆಲೆಗೆ ತರಲು ಶ್ರಮಿಸಿ, ಉತ್ತಮ ಆಡಳಿತ ನೀಡಿದ ಕೆಂಪೇಗೌಡರ ಆಡಳಿತ ಹಾಗೂ ಜಾತ್ಯತೀತ ಪರಿಕಲ್ಪನೆ ಇಂದಿನ ಜನಪ್ರತಿನಿಧಿಗಳಿಗೆ ಆದರ್ಶವಾಗಬೇಕು. ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳ ಫಲ ಕಾರಣ ಎಂದು ಹೇಳಿದರು.
ಪಕ್ಷ ಯಾವುದೇ ಇರಲಿ, ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದು ಹೆಮ್ಮೆಯ ವಿಚಾರ. ಎರಡು ವರ್ಷದಲ್ಲಿ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ಹಾಗೂ ಕೃಷಿಗೆ ನೀರುಣಿಸುವ ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸುವಂತೆ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಒಕ್ಕಲಿಗರ ಭವನದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಕೆಂಪೇಗೌಡ ಮೂರ್ತಿಯ ಉತ್ಸವ ವಿವಿಧ ಕಲಾತಂಡಗಳೊಡನೆ ನಡೆಯಿತು.