ಕಾರವಾರ: ಆದರ್ಶ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆಡಳಿತವು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಆ್ಯಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಸೈಲ್ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಆಡಳಿತದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕೆರೆ-ಕಟ್ಟೆಗಳು, ದೇವಸ್ಥಾನಗಳು, ಸ್ಮಾರಕಗಳನ್ನು ನಿರ್ಮಾಣ ಮಾಡಿ ಬೆಂಗಳೂರು ನಗರವನ್ನು ಇಡೀ ವಿಶ್ವದಲ್ಲಿಯೇ ಮಾದರಿ ನಗರವಾಗಿ ನಿರ್ಮಿಸುವ ಮೂಲಕ ಬೆಂಗಳೂರು ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಕುಮಟಾ: ಇಲ್ಲಿನ ತಾಪಂ ಸಭಾಭವನದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡ ಅವರ ೫೧೫ನೇ ಜಯಂತಿಯನ್ನು ತಾಲೂಕಾಡಳಿತ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಿದರು.ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಉದ್ಘಾಟಿಸಿ ಮಾತನಾಡಿ, ನಾಡಿನಲ್ಲಿ ಹಿಂದೆ ಕೆಂಪೇಗೌಡರಂತೆ ಆಗಿಹೋದ ಶರಣರು, ಸಂತರು, ಜ್ಞಾನಿಗಳು, ವಚನಕಾರರು, ಮಹಾಪುರುಷರು ಸ್ಮರಣೀಯರಾಗಿರುವ ಹಿಂದೆ ಅವರ ಸಾಧನೆ ಮತ್ತು ಚಿಂತನೆಗಳು ನಮಗೆ ಸದಾ ಮಾರ್ಗದರ್ಶಿಯಾಗಿರುವುದೇ ಕಾರಣ. ಅದನ್ನೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಪಂ ಇಒ ರಾಜೇಂದ್ರ ಭಟ್ಟ ಮಾತನಾಡಿ, ಬೆಂಗಾಡಾಗಿದ್ದ ಬೆಂಗಳೂರನ್ನು ಕನ್ನಡದ ಹೆಮ್ಮೆಯ ನಾಡನ್ನಾಗಿ ಪರಿವರ್ತಿಸಿದ ಕೀರ್ತಿ ಕೆಂಪೇಗೌಡ ಅವರಿಗೆ ಸಲ್ಲುತ್ತದೆ. ಕೆರೆಕಟ್ಟೆಗಳನ್ನು ಕಟ್ಟಿ, ಹಸಿರನ್ನು ಬೆಳೆಸಿ, ಇಡೀ ಬೆಂಗಳೂರು ಹಸಿರಾಗಿ ಇರಲು ಕಾರಣರಾಗಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಪ್ರವೀಣ ಕರಾಂಡೆ ಮಾತನಾಡಿ, ಬೆಂಗಳೂರನ್ನು ಹಸಿರು ನಗರವಾಗಿ ಕಟ್ಟಿದ ಕೆಂಪೇಗೌಡ ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದರು.
ಮಲ್ಲಾಪುರ ಪ್ರೌಢಶಾಲೆಯ ಶಿಕ್ಷಕ ರಾಮಚಂದ್ರ ಮಡಿವಾಳ ವಿಶೇಷ ಉಪನ್ಯಾಸ ಮಾಡಿದರು. ಪುರಸಭೆ ಸದಸ್ಯೆ ಲಕ್ಷ್ಮೀ ಮುಕ್ರಿ, ಒಕ್ಕಲಿಗ ಸಮಾಜ ಪ್ರಮುಖರಾದ ಗೋವಿಂದ ಗೌಡ, ಡಾ. ಶ್ರೀಧರ ಗೌಡ, ಮಂಜುನಾಥ ಪಟಗಾರ ಇತರರು ಇದ್ದರು. ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ ವಂದಿಸಿದರು.