ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರು ನಗರಸಭೆ ವ್ಯಾಪ್ತಿಯ ಬನ್ನೂರಿನ ಜೈನರಗುರಿ ಎಂಬಲ್ಲಿ ಗುರುವಾರ ನಸುಕಿನ ಜಾವ ಮಜೀದ್ ಎಂಬವರ ಮನೆ ಮೇಲೆ ಸಮೀಪದ ಧರೆಯ ಮಣ್ಣು ಕುಸಿದು ಮೇಲೆ ಬಿದ್ದಿದ್ದು, ಮನೆಗೆ ಭಾಗಶಃ ಹಾನಿಯಾಗಿದೆ.
ಬುಧವಾರ ರಾತ್ರಿ ಮಜೀದ್ ಮತ್ತವರ ಕುಟುಂಬಸ್ಥರು ಊಟ ಮಾಡಿ ಮಲಗಿದ್ದು, ಗುರುವಾರ ಮುಂಜಾನೆಯ ಹೊತ್ತಿಗೆ ಮನೆಯ ಪಕ್ಕದ ಎತ್ತರದ ಧರೆಯು ಹಠಾತ್ ಕುಸಿದು ಮನೆಯ ಮೇಲೆ ಬಿದ್ದಿದೆ. ಇದರಿಂದ ಮನೆಯ ಹಿಂಭಾಗದ ಅರ್ಧದಷ್ಟು ಭಾಗ ಸಂಪೂರ್ಣ ಹಾನಿಗೀಡಾಗಿದೆ. ಮನೆಯ ಛಾವಣಿ ಮತ್ತು ಗೋಡೆ ಕುಸಿದು ಒಳಗೆ ಬಿದ್ದಿದೆ. ಇದರೊಂದಿಗೆ ಧರೆಯ ಮಣ್ಣು ಕೂಡ ಮನೆಯೊಳಗೆ ತುಂಬಿಕೊಂಡಿದೆ. ಮಜೀದ್ ಮತ್ತವರ ಕುಟುಂಬ ಸದಸ್ಯರು ಕೋಣೆಯೊಂದರಲ್ಲಿ ಮಲಗಿದ್ದರು. ಅವರ ಮೇಲೆಯೇ ಮಣ್ಣು ಬೀಳುವ ಅಪಾಯದಲ್ಲಿದ್ದು, ಮಜೀದ್ ಅವರು ತಕ್ಷಣವೇ ಪುಟ್ಟ ಮಗು ಸಹಿತ ಮನೆಯವನ್ನು ರಕ್ಷಣೆ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಸದಸ್ಯರಾದ ಫಾತಿಮಾತ್ ಜೊಹರಾ, ಪಿ.ಜಿ. ಜಗನ್ನಿವಾಸ ರಾವ್, ತಹಸೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು, ನಗರಸಭೆಯ ಪೌರಾಯುಕ್ತ ಮಧು ಎಸ್. ಮನೋಹರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಪಕ್ಷದ ಮುಖಂಡರಾದ ಪ್ರಸನ್ನ ಶೆಟ್ಟಿ, ಶಾಸಕರ ಕಚೇರಿ ಸಿಬ್ಬಂದಿ ಮತ್ತಿತರರು ಬೇಟಿ ಪರಿಶೀಲನೆ ನಡೆಸಿದ್ದಾರೆ.
ಮನೆಯೊಳಗೆ ಬಿದ್ದ ಮಣ್ಣು ತೆರವು ಮಾಡುವ ಮತ್ತು ಕುಸಿದ ಮನೆಯ ಅವಶೇಷಗಳನ್ನು ತೆರವು ಮಾಡುವ ಕೆಲಸ ನಡೆಸಲಾಗಿದೆ. ಮನೆಯವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಕುಸಿದ ಸ್ಥಳಕ್ಕೆ ಟಾರ್ಪಾಲ್ ಹೊದಿಸಲಾಗಿದೆ.