ಕನ್ನಡಪ್ರಭ ವಾರ್ತೆ ಚಿಂತಾಮಣಿ
೧೯೯೯ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಂಗವಿಕಲನಾಗಿ ನಿವೃತ್ತಿ ಹೊಂದಿದ ಸೈನಿಕನೊಬ್ಬ ಕಳೆದ ೨೬ ವರ್ಷಗಳಿಂದ ತನಗೆ ಸರ್ಕಾರದ ವತಿಯಿಂದ ನೀಡಬೇಕಾದ ೨ ಹೇಕ್ಟರ್ (೫ ಎಕರೆ) ಭೂಮಿಯನ್ನು ಇನ್ನೂ ನೀಡಿಲ್ಲ ಎಂದು ಕಳೆದ ೧೧ ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ೧೨ನೇ ದಿನದಂದು ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಮಾಜಿ ಸೈನಿಕ ಶಿವಾನಂದರೆಡ್ಡಿಯವರ ಪ್ರತಿಭಟನೆಗೆ ಸಾಥ್ ನೀಡಿದರು.ನಗರದ ತಾಲೂಕು ಕಚೇರಿ ಆವರಣದಲ್ಲಿ ಧರಣಿನಿರತ ಸೈನಿಕನಿಗೆ ಬೆಂಬಲಿಸಿ ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಗೋಪಲ್ಲಿ ರಘುನಾಥರೆಡ್ಡಿ ಮಾತನಾಡಿ, ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಭೂಮಿ ಮಂಜೂರಾತಿಗಾಗಿ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದರು. ಆದರೆ ಕನಿಷ್ಠ ಸೈನಿಕನೆಂಬ ಕರುಣೆಯನ್ನು ತೋರದೆ ಎಲ್ಲಾ ಸರ್ಕಾರಗಳು ಉದಾಸೀನ ತೋರಿರುವುದನ್ನು ಖಂಡಿಸುತ್ತಿದ್ದು, ಸೈನಿಕನಿಗೆ ಶೀಘ್ರ ಭೂಮಿ ಮಂಜೂರು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ. ಮಂಜುನಾಥ್ ಮಾತನಾಡಿ, ಅಂಗವಿಕಲ ಮಾಜಿ ಸೈನಿಕನೆಂಬ ಕರುಣೆಯೂ ಇಲ್ಲದೆ ಭೂಮಿ ನೀಡದೆ ಅವಮಾನಿಸುತ್ತಿದ್ದು, ಸೈನಿಕನು ಸೇವೆ ಸಲ್ಲಿಸಿ ೨೬ ವರ್ಷಗಳು ಕಳೆದರೂ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸರ್ಕಾರ ಈ ರೀತಿ ನಡೆಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಕೂಡಲೇ ತಹಸೀಲ್ದಾರ್, ಜಿಲ್ಲಾಧಿಕಾರಿಗಳು ಸೈನಿಕನ ಮನವಿಯನ್ನು ಪುರಸ್ಕರಿಸಿ ಭೂಮಿಯನ್ನು ಮಂಜೂರು ಮಾಡಬೇಕು, ಮೀನಮೇಷ ಎಣಿಸಿದರೆ ಒಕ್ಕಲಿಗರ ಸಂಘದಿಂದ ಹೋರಾಟಕ್ಕೆ ಮುಂದಾಗುವುದು ಹಾಗೂ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಚಿಂತಾಮಣಿ ಬಂದ್ ಮಾಡಲಾಗುವುದೆಂದು ಎಚ್ಚರಿಸಿದರು.ಮಾಜಿ ಸೈನಿಕ ಶಿವಾನಂದರೆಡ್ಡಿಯವರ ನ್ಯಾಯಯುತ ಹೋರಾಟಕ್ಕೆ ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘವು ಸಾಥ್ ನೀಡಿ ತಹಸೀಲ್ದಾರ್ ಸುದರ್ಶನ್ ಯಾದವ್‌ಗೆ ಮನವಿ ಪತ್ರ ಸಲ್ಲಿಸಿದರು.
ಹರೀಶ್‌ಗೌಡ, ರವೀಂದ್ರಗೌಡ, ಕರಕಮಾಕಲಹಳ್ಳಿ ದೇವರಾಜ್, ಪಾಲೇಪಲ್ಲಿ ಶಿವಾರೆಡ್ಡಿ, ಪ್ರಸಾದ್‌ರೆಡ್ಡಿ, ಶ್ರೀನಿವಾಸ್‌ರೆಡ್ಡಿ, ಬೈರೇಗೌಡ, ಸುಬ್ಬಾರೆಡ್ಡಿ, ವೆಂಕಟರೆಡ್ಡಿ, ಚಂದ್ರ, ರೆಡ್ಡೆಪ್ಪ, ಭಾಗ್ಯನಗರ ಮಲ್ಲಿ, ಅರವಿಂದರೆಡ್ಡಿ, ಕನ್ನಡ ರಮೇಶ್, ಶಿವಾರೆಡ್ಡಿ, ಮುನಿಶಾಮಿರೆಡ್ಡಿ, ಮನೋಹರ್, ರಾಹುಲ್ ಕೆಂಪೇಗೌಡ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಇದ್ದರು.