ಹೊನ್ನಾವರ: ತಾಲೂಕಿನ ಅಡಿಕೆಕುಳಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಅನಧಿಕೃತ ನಾಡ ಬಂದೂಕಿನಿಂದ ಒಂದು ಕೆಂದಳಿಲು(ಕೆಸಾಳ) ಬೇಟೆಯಾಡಿದ ಆರೋಪಿಯನ್ನು ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ್ದಾರೆ.ಬಂಧಿತ ಆರೋಪಿ ತಾಲೂಕಿನ ಅಡಿಕೆಕುಳಿ, ಹಾಲಳ್ಳಿಯ ನಿವಾಸಿ ಪ್ರವೀಣ ಧರ್ಮಾ ನಾಯ್ಕ ಎಂದು ಗುರುತಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ ಪಿ. ಬಿ. ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸವಿತಾ ಆರ್. ದೇವಾಡಿಗ ನೇತೃತ್ವದಲ್ಲಿ ದಾಳಿ ನಡೆದಿದೆ.
ನಾಪತ್ತೆಯಾಗಿದ್ದ ಇಬ್ಬರು ತಮಿಳುನಾಡಿನಲ್ಲಿ ಪತ್ತೆ
ಶಿರಸಿ: ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರನ್ನು ತಮಿಳುನಾಡಿನಲ್ಲಿ ಪತ್ತೆ ಹಚ್ಚುವಲ್ಲಿ ಶಿರಸಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಇಲ್ಲಿನ ಗಣೇಶ ನಗರದ ಗೋಸಾವಿಗಲ್ಲಿಯ 14 ವರ್ಷದ ಮತ್ತು 12 ವರ್ಷದ ಬಾಲಕಿಯರು ಗೋಸಾವಿಗಲ್ಲಿರುವ ಮನೆಯಿಂದ ಕಾರವಾರಕ್ಕೆ ಹೋಗುತ್ತೇವೆ ಎಂದು ಹೇಳಿ ಹೋದವರು ಕಾರವಾರಕ್ಕೆ ತೆರಳದೇ ಮತ್ತು ಮನೆಗೂ ವಾಪಸ್ ಬಾರದೇ ಇದ್ದರಿಂದ ಬಾಲಕರಿಯರು ನಾಪತ್ತೆಯಾಗಿದ್ದಾರೆ ಆಥವಾ ಅಪಹರಿಸಿದ್ದಾರೆ ಎಂದು ಶೋಭಾ ಯುವರಾಜ ಗೋಸಾವಿ ಮೇ ೧೨ಎಂದು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿರಸಿ ನಗರ ಠಾಣೆಯ ಪೊಲೀಸರು ಕ್ಷೀಪ್ರ ಕಾರ್ಯಪ್ರವೃತ್ತಗೊಂಡು ಕಾಣೆಯಾದ ಬಾಲಕಿಯರನ್ನು ೪೮ ಗಂಟೆಯೊಳಗಡೆ ತಮಿಳುನಾಡಿನ ಕಟ್ಟಪಾಡಿಯಲ್ಲಿ ಪತ್ತೆ ಮಾಡಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ, ಶಿರಸಿ ಡಿಎಸ್ಪಿ ಎಂ.ಎಸ್. ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ನೆಲ್ಸನ್ ಮೆಂಥಾರೋ, ಅಶೋಕ ರಾಥೋಡ್, ಹೊನ್ನಪ್ಪ ಆಗೇರ, ವಿಶ್ವನಾಥ ಭಂಡಾರಿ, ಪ್ರಶಾಂತ ಪಾವಸ್ಕರ್, ಹನುಮಂತ ಕಬಾಡಿ, ವಿಜಯಲಕ್ಷ್ಮೀ, ಪ್ರವೀಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ನಗರ ಠಾಣೆ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.