ಕಾಯಕಲ್ಪಕ್ಕೆ ಕಾದಿರುವ ಕೆಂಗಲ್ ಅತಿಥಿ ಗೃಹ

KannadaprabhaNewsNetwork |  
Published : Feb 14, 2026, 02:15 AM IST
ಪೊಟೋ೧೨ಸಿಪಿಟಿ೧,೨: ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ಅತಿಥಿ ಗೃಹ ಪಾಳು ಬಿದ್ದಿರುವುದು. | Kannada Prabha

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಬೆಂ-ಮೈ ಹೆದ್ದಾರಿಯಲ್ಲಿರುವ ಕೆಂಗಲ್ ಬಳಿ(ಚಂದ್ರಗಿರಿದೊಡ್ಡಿ) ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಕಟ್ಟಿಸಿದ್ದ ಅತಿಥಿ ಗೃಹ ನಿರ್ವಹಣೆ ಇಲ್ಲದೆ ಶಿಥಿಲಗೊಂಡು, ಅನೈತಿಕ ಚಟುವಟಿಕೆಗಳ ತಾಣವಾಗಿದೆ

ಚನ್ನಪಟ್ಟಣ: ತಾಲೂಕಿನ ಬೆಂ-ಮೈ ಹೆದ್ದಾರಿಯಲ್ಲಿರುವ ಕೆಂಗಲ್ ಬಳಿ(ಚಂದ್ರಗಿರಿದೊಡ್ಡಿ) ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಕಟ್ಟಿಸಿದ್ದ ಅತಿಥಿ ಗೃಹ ನಿರ್ವಹಣೆ ಇಲ್ಲದೆ ಶಿಥಿಲಗೊಂಡು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ತಮ್ಮ ಅಧಿಕಾರವಧಿಯಲ್ಲಿ ಚಂದ್ರಗಿರಿದೊಡ್ಡಿಯ ಗುಡ್ಡದ ಮೇಲೆ ಉತ್ತಮ ವಾಸ್ತುಶೈಲಿಯ ಅತಿಥಿ ಗೃಹ ನಿರ್ಮಿಸಿದ್ದರು. ಅವರು ನಿರ್ಮಿಸಿದ ವಿಧಾನಸೌಧದಲ್ಲಿ ಕುಳಿತು ಆಡಳಿತ ನಡೆಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅವರೇ ನಿರ್ಮಿಸಿರುವ ಅತಿಥಿ ಗೃಹ ನಿರ್ಲಕ್ಷಿಸಿರುವುದು ವಿಪರ್ಯಾಸವೇ ಸರಿ.

ಅತಿಥಿ ಗೃಹ ನಿರ್ಮಾಣ:

ಕೆಂಗಲ್‌ನಲ್ಲಿರುವ ಬೃಹತ್ ಆಂಜನೇಯ ದೇವಾಲಯದ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದ ಹನುಮಂತಯ್ಯ ಆಗಿಂದಾಗ್ಗೆ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ೧೯೭೫ರ ಸುಮಾರಿನಲ್ಲಿ ಕೆಂಗಲ್ ಬಳಿ ಇರುವ ಚಂದ್ರಗಿರಿದೊಡ್ಡಿ ಗುಡ್ಡದ ಮೇಲೆ ಕೆಂಗಲ್ ಹನುಮಂತಯ್ಯ ಕೋರಿಕೆ ಮೇರೆಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಅವರು ಈ ಅತಿಥಿ ಗೃಹ ನಿರ್ಮಿಸಿಕೊಟ್ಟರು. ಹನುಮಂತಯ್ಯ ಮೃತಪಟ್ಟ ನಂತರ, ಸರ್ಕಾರ ಕಟ್ಟಡದ ನಿರ್ವಹಣೆಗೆ ಮುಂದಾಗಲಿಲ್ಲ. ಕೆಂಗಲ್ ಆಂಜನೇಯ ದೇವಸ್ಥಾನದಿಂದ ಈ ಕಟ್ಟಡ ತುಸು ದೂರವಿದ್ದ ಕಾರಣ, ಕಟ್ಟಡದತ್ತ ಯಾರೂ ಗಮನಹರಿಸದ ಕಾರಣ ಇಂದು ಪಾಳು ಕೊಂಪೆಯಂತಾಗಿದೆ. ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದಿದೆ. ಕಟ್ಟಡಕ್ಕೆ ಹೋಗಲು ಸೂಕ್ತ ಮಾರ್ಗ ಕೂಡ ಇಲ್ಲವಾಗಿದೆ. ಕಟ್ಟಡದ ಬಳಿ ಯಾರೂ ಸುಳಿಯದ ಕಾರಣ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ.

ವಿಶಿಷ್ಟ ಶೈಲಿ:

ಕೆಂಗಲ್ ಅತಿಥಿಗೃಹ ಕಟ್ಟಡವನ್ನು ಸ್ವಸ್ತಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಎರಡು ದೊಡ್ಡ ಹಾಲ್, ಎರಡು ಪ್ರತ್ಯೇಕ ಕೊಠಡಿ, ಅಡುಗೆ ಕೋಣೆ, ಶೌಚಾಲಯ ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ೨೦ಕ್ಕೂ ಹೆಚ್ಚು ಕಿಟಿಕಿ ಬಾಗಿಲುಗಳಿದ್ದು, ಕಟ್ಟಡದ ಸುತ್ತ ಇಳಿಜಾರು ಪ್ರದೇಶವಿದೆ. ಕಟ್ಟಡದ ಹೊರಗೆ ಪೂರ್ವ ಹಾಗೂ ಉತ್ತರ ದಿಕ್ಕಿಗೆ ಅಭಿಮುಖವಾಗಿ ಹಾಕಿರುವ ಕಲ್ಲು ಬೆಂಚುಗಳ ಮೇಲೆ ಕುಳಿತು, ಸುತ್ತಮುತ್ತಲಿನ ಪ್ರಕೃತಿಯನ್ನು ಸವಿಯಬಹುದಾಗಿದೆ.

ಕಲ್ಲಿನಿಂದ ನಿರ್ಮಿಸಿರುವ ಕಾರಣ ಕಟ್ಟಡ ಇಂದಿಗೂ ಗಟ್ಟಿ ಮುಟ್ಟಾಗಿದೆ. ಆದರೆ, ಛಾವಣಿ ಸಂಪೂರ್ಣ ಶಿಥಿಲಗೊಂಡು ಕಳಚಿ ಬಿದ್ದಿದೆ. ಕಿಟಕಿ ಹಾಗೂ ಬಾಗಿಲುಗಳನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿದ್ದಾರೆ.

ಕೆಂಗಲ್ ಹನುಮಂತಯ್ಯ ಈ ಕಟ್ಟಡ ಸಾಂಸ್ಕೃತಿಕ ಕೇಂದ್ರವಾಗಬೇಕು. ಜಿಲ್ಲಾಡಳಿತ ಕೂಡಲೇ ಕಟ್ಟಡವನ್ನು ವಶಕ್ಕೆ ಪಡೆದು, ಜೀರ್ಣೋದ್ಧಾರ ಮಾಡಬೇಕು. ಕಟ್ಟಡವನ್ನು ಕೆಂಗಲ್ ನೆನಪಿನ ಸಾಂಸ್ಕೃತಿಕ ಭವನ ಎಂದು ಘೋಷಿಸಿ, ಸಾಂಸ್ಕೃತಿಕ ಚಟುವಟಿಕೆ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಸ್ನೇಹ ಕೂಟ ಸಂಸ್ಥೆ ಅಧ್ಯಕ್ಷ ಎಚ್.ಪಿ.ನಂಜೇಗೌಡ ತಿಳಿಸಿದ್ದಾರೆ.

ಇಂದಿರಾಗಾಂಧಿ ಭೇಟಿ ನೀಡಿದ್ದ ಕಟ್ಟಡ:

ಕೆಂಗಲ್ ಹನುಮಂತಯ್ಯ ಕಟ್ಟಿಸಿರುವ ಅತಿಥಿ ಗೃಹಕ್ಕೆ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಸೇರಿದಂತೆ ಹಲವು ರಾಜಕಾರಣಿಗಳು ಭೇಟಿ ನೀಡಿದ್ದರು. ಕೆಂಗಲ್ ಹನುಮಂತಯ್ಯ ಈ ಕಡೆ ಬಂದಾಗ ಬಹುಪಾಲು ಸಮಯವನ್ನು ಇಲ್ಲೇ ಕಳೆಯುತ್ತಿದ್ದರಂತೆ. ಆದ್ದರಿಂದ ಈ ಅತಿಥಿ ಗೃಹದಲ್ಲಿ ಕೆಂಗಲ್ ಹನುಮಂತಯ್ಯ ಅವರಿಗೆ ಸಂಬಂಧಿಸಿದಂತಹ ವಸ್ತು ಸಂಗ್ರಹಾಲಯವನ್ನು ಸರ್ಕಾರ ಸ್ಥಾಪಿಸಬೇಕು ಎಂಬುದು ಸ್ಥಳೀಯರ ಆಗ್ರಹ.

ಬಾಕ್ಸ್‌........

ಕೆಂಗಲ್ ಹನುಮಂತಯ್ಯ ಸ್ಮಾರಕ ನಿರ್ಮಿಸಿ: ಕುಮಾರಸ್ವಾಮಿ

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯ ಅವರ ಸ್ಮಾರಕ ಹಾಗೂ ಪ್ರತಿಮೆ ನಿರ್ಮಾಣ ಮಾಡಬೇಕು. ಕೆಂಗಲ್ ಬಳಿ ನಿರ್ಮಿಸಿರುವ ಅತಿಥಿಗೃಹದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒತ್ತಾಯಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಇಂದು ಅವರ ಸಮಾಧಿ ಹಾಗೂ ಅವರು ನಿರ್ಮಿಸಿದ ಅತಿಥಿ ಗೃಹ ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿದೆ. ಸಮಾಧಿ ಬಳಿ ಅವರ ಸ್ಮಾರಕ ನಿರ್ಮಾಣಕ್ಕೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಕನ್ನಡಪರ ಸಂಘಟನೆಗಳು, ಹನುಮಂತಯ್ಯ ಅಭಿಮಾನಿಗಳು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ವಿಭಾಗೀಯ ಅಧ್ಯಕ್ಷ ಮಲ್ಲಯ್ಯ ಮಾತನಾಡಿ, ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರನ್ನು ಈ ಸರ್ಕಾರ ಮರೆತಿದೆ. ಅವರ ಸಮಾಧಿ ಹಾಗೂ ಅವರು ನಿರ್ಮಿಸಿದ ಅತಿಥಿ ಗೃಹವನ್ನು ನಿರ್ಲಕ್ಷ್ಯ ಮಾಡಿರುವುದು ಅಕ್ಷಮ್ಯ. ಅತಿಥಿ ಗೃಹದ ಅಭಿವೃದ್ಧಿ ಜತೆಗೆ ಹನುಮಂತಯ್ಯ ಸ್ಮಾರಕ ನಿರ್ಮಾಣಕ್ಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಕಾಶ್, ಶ್ರೀನಿವಾಸ್ ಮೂರ್ತಿ ಹಾಜರಿದ್ದರು.

ಪೊಟೋ೧೨ಸಿಪಿಟಿ೫:

ಕೆಂಗಲ್ ಹನುಮಂತಯ್ಯ ಸಮಾಧಿ ಬಳಿ ಕುಮಾರಸ್ವಾಮಿ ಹಾಗೂ ಮಲ್ಲಯ್ಯ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪೊಟೋ೧೨ಸಿಪಿಟಿ೧,೨:

ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ಅತಿಥಿ ಗೃಹ ಪಾಳು ಬಿದ್ದಿರುವುದು.

ಪೊಟೋ೧೨ಸಿಪಿಟಿ೩:

ಕಿತ್ತುಬೀಳುತ್ತಿರುವ ಛಾವಣಿ.

ಪೊಟೋ೧೨ಸಿಪಿಟಿ೪:

ಕೆಂಗಲ್ ಹನುಮಂತಯ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೇಲಿ ಮಂಗನ ಕಾಯಿಲೆ ಬಗ್ಗೆ ಎಚ್ಚರವಿರಲಿ: ಶೈಲಾ ಸಲಹೆ
ಸಂಕಷ್ಟಕ್ಕೆ ಸ್ಪಂದಿಸಿದರೆ ಅದು ಗುಂಪುಗಾರಿಕೆಯೇ?