ರಾಜ್ಯದ ಅಭಿವೃದ್ಧಿಗೆ ಕೆಂಗಲ್ ಹನುಮಂತಯ್ಯ ಕೊಡುಗೆ ಅಪಾರ

KannadaprabhaNewsNetwork |  
Published : Sep 20, 2026, 02:30 AM IST
ಪೋಟೋ 10 : ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಬಾಲಕೃಷ್ಣರವರನ್ನು ಆಯೋಜಕರು ಸನ್ಮಾನಿಸಿದರು | Kannada Prabha

ಸಾರಾಂಶ

ರಾಜ್ಯದ ಅಭಿವೃದ್ಧಿಗೆ ಮತ್ತು ದೂರದೃಷ್ಟಿ ಆಡಳಿತಕ್ಕೆ ಕೆಂಗಲ್ ಹನುಮಂತಯ್ಯ ನೀಡಿದ ಕೊಡುಗೆ ಅಪಾರ. ಅಂತಹ ಮಹಾನ್ ನಾಯಕರ ಪ್ರತಿಮೆ ಲೋಕಾರ್ಪಣೆ ಮಾಡುವ ಭಾಗ್ಯ ನನಗೆ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕಿನ ಕೇಂದ್ರ ಸಚಿವದ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ನೆಲಮಂಗಲ

ರಾಜ್ಯದ ಅಭಿವೃದ್ಧಿಗೆ ಮತ್ತು ದೂರದೃಷ್ಟಿ ಆಡಳಿತಕ್ಕೆ ಕೆಂಗಲ್ ಹನುಮಂತಯ್ಯ ನೀಡಿದ ಕೊಡುಗೆ ಅಪಾರ. ಅಂತಹ ಮಹಾನ್ ನಾಯಕರ ಪ್ರತಿಮೆ ಲೋಕಾರ್ಪಣೆ ಮಾಡುವ ಭಾಗ್ಯ ನನಗೆ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕಿನ ಕೇಂದ್ರ ಸಚಿವದ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನೆಲಮಂಗಲದ ತಾಲೂಕು ಕಚೇರಿ ಮುಂದೆ ಒಕ್ಕಲಿಗರ ಯುವ ವೇದಿಕೆ ಸ್ಥಾಪಿಸಿರುವ ಕರ್ನಾಟಕದ 2ನೇ ಮುಖ್ಯಮಂತ್ರಿ ಹಾಗೂ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯನವರ ಸರಳತೆ, ಪ್ರಾಮಾಣಿಕತೆ ಹಾಗೂ ನಾಡಿನ ಏಳಿಗೆಗಾಗಿ ಶ್ರಮಿಸಿದ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ವಿರೋಧಗಳ ನಡುವೆಯೂ ಕರ್ನಾಟಕ ಏಕೀಕರಣದ ಕನಸು ನನಸು ಮಾಡಿದ ಕೆಂಗಲ್ ಹನುಮಂತಯ್ಯನವರು ವಿಧಾನಸೌಧವನ್ನು ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಎಂದಿಗೂ ಜನಮನದಲ್ಲಿ ನೆಲೆಸಿದ್ದಾರೆ. ಅವರನ್ನು ಕೆಳಗಿಳಿಸಿದವರು ಮರೆಯಾಗಿ ಹೋದರು. ಇಂದಿರಾಗಾಂಧಿಯವರ ಜತೆ ಕೆಲಸ ಮಾಡಿದ್ದಲ್ಲದೆ, ಕೆಲಸವಾಗಬೇಕು ಎಂದಾಗ ಪ್ರಧಾನಿಗಳನ್ನು ನೇರವಾಗಿ ಪ್ರಶ್ನೆ ಮಾಡುತ್ತಿದ್ದವರು. ಇಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಒಕ್ಕಲಿಗ ಯುವ ವೇದಿಕೆ ನಿರ್ಮಾಣ ಮಾಡಿರುವುದು ಸ್ವಾಗತಾರ್ಹ. ಇದು ರಾಜ್ಯದಲ್ಲಿಯೇ ಅತಿ ಎತ್ತರದ ಕೆಂಗಲ್ ಹನುಮಂತಯ್ಯ ಪ್ರತಿಮೆಯಾಗಿದೆ ಎಂದು ಪ್ರಶಂಶಿಸಿದರು.

ಪೌರಾಡಳಿತ ಸಚಿವ ಬಾಲಕೃಷ್ಣ ಮಾತನಾಡಿ, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ನಿರ್ಮಾಣ ಮಾಡದಿದ್ದರೆ ಇಂದು ಉತ್ತರ ಕರ್ನಾಟಕ ಭಾಗದಲ್ಲಿ ರಾಜಧಾನಿಯನ್ನು ನೋಡಬೇಕಾಗಿತ್ತು. ಅವರ ಹೋರಾಟಗಳು, ಸಮಾಜಕ್ಕೆ ನೀಡಿದ ಕೊಡುಗೆಗಳು ಸರ್ವಕಾಳಕ್ಕೂ ಮಾದರಿಯಾಗಿದೆ. ಕೆಂಗಲ್ ಹನುಮಂತಯ್ಯನವರ ಆದರ್ಶಗಳಲ್ಲಿಯೇ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಗುತ್ತಿದ್ದಾರೆ. ಟೀಕೆಗಳು ಎಷ್ಟೇ ಬಂದರೂ ನಾವು ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಒಕ್ಕಲಿಗರು ಒಕ್ಕಲಿಗ ನಾಯಕನಿಗೆ ಪ್ರತಿಮೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಶಾಸಕ ಶ್ರೀನಿವಾಸ್ ಮಾತನಾಡಿ, ಕೆಂಗಲ್ ಹನುಮಂತಯ್ಯನವರು ದೇಶ ಕಂಡ ಅಪರೂಪದ ರಾಜಕಾರಣಿ. ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿರುವ ಮಹಾನ್‌ನಾಯಕರು. ದೂರದೃಷ್ಟಿ ಹೊಂದಿದ್ದ ನಾಯಕ ಇಡೀ ವಿಶ್ವವೇ ಮೆಚ್ಚುವ ಆಡಳಿತ ಸೌಧವನ್ನು ನಿರ್ಮಿಸಿದರು. ಕೆಂಗಲ್ ಹನುಮಂತಯ್ಯ ಇಲ್ಲದಿದ್ದರೆ ವಿಧಾನಸೌಧ ಇರುತ್ತಿರಲಿಲ್ಲ. ವಿಧಾನಸೌಧ ಇಲ್ಲದಿದ್ದರೆ ಬೆಂಗಳೂರಿಗೆ ಗೌರವ ಇರುತ್ತಿರಲಿಲ್ಲ. ಸತ್ಯವೇ ಕೆಲಸ, ಕರ್ತವ್ಯವೇ ದೇವರು ಎಂಬ ಸಂದೇಶ ಸಾರಿದ ಕೆಂಗಲ್‌ ಹನುಮಂತಯ್ಯ ದಕ್ಷ ಆಡಳಿತಗಾರರಾಗಿದ್ದರು. ರಾಜಕಾರಣದಲ್ಲಿ ನಮಗೆಲ್ಲಾ ಅವರ ಆದರ್ಶಗಳು ಮಾದರಿ ಎಂದು ಹೇಳಿದರು.

ಶ್ರೀ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೆಂಗಲ್ ಹನುಮಂತಯ್ಯನವರ ಕೊಡುಗೆ ರಾಜಕೀಯ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು, ಸ್ವಾಭಿಮಾನಿ ರಾಜಕಾರಣಿಯಾಗಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದವರು. ಒಕ್ಕಲಿಗರ ಯುವವೇದಿಕೆ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಲು ದೊಡ್ಡಕಂಚಿನ ಪ್ರತಿಮೆ ನಿರ್ಮಿಸಿರುವುದು ಸ್ವಾಗತಾರ್ಹ. ಒಕ್ಕಲಿಗ ಸಮುದಾಯದ ಮುಖಂಡರು ಮಾಡುವ ಸೇವೆಗಳು ಎಲ್ಲಾ ಸಮುದಾಯಗಳಿಗೆ ಸಲ್ಲುತ್ತಿರುವುದು ಮನಗಾಣ ಬಹುದಾಗಿದೆ ಎಂದರು.

ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವದೂತಸ್ವಾಮೀಜಿ ಮಾತನಾಡಿ, ಕೆಂಗಲ್ ಹನುಮಂತಯ್ಯ ವಿಧಾನಸೌಧ ನಿರ್ಮಿಸಿದರು. ಎಸ್.ಎಂ.ಕೃಷ್ಣ ವಿಕಾಸಸೌಧ ನಿರ್ಮಿಸಿದರು, ಎಚ್.ಡಿ.ಕುಮಾರಸ್ವಾಮಿ ಸುವರ್ಣಸೌಧ ನಿರ್ಮಿಸಿದರು, ಕ್ರಿಯಾಶೀಲ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ವಿಧಾನಸೌಧದ ಸಮೀಪವೇ ಎಲ್ಲಾ ಇಲಾಖೆಗಳು ಒಂದೇ ಕಟ್ಟಡದಲ್ಲಿ ಕೆಲಸ ನಿರ್ವಹಿಸುವ ಭವ್ಯ ಕರ್ತವ್ಯ ಸೌಧ ನಿರ್ಮಿಸಬೇಕು. ಕೆಂಗಲ್ ಹನುಮಂತಯ್ಯನವರ ಆದರ್ಶ ಎಲ್ಲಾ ರಾಜಕಾರಣಿಗಳು ಅನುಸರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಸವನಹಳ್ಳಿ ಮಠದ ಶ್ರೀ ರಮಾಣಾನಂದನಾಥ ಸ್ವಾಮೀಜಿ, ಶಾಸಕ ಶ್ರೀನಿವಾಸ್, ಸಂಸದ ಡಾ.ಕೆ.ಸುಧಾಕರ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ರವಿ, ಮಾಜಿ ಶಾಸಕರಾದ ಎಂ.ವಿ.ನಾಗರಾಜು, ಡಾ.ಕೆ.ಶ್ರೀನಿವಾಸಮೂರ್ತಿ, ಮಾಜಿ ಎಂಎಲ್‍ಸಿ ಬಿಎಂಎಲ್ ಕಾಂತರಾಜು, ಈ.ಕೃಷ್ಣಪ್ಪ, ಎನ್‍ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಹೇಮಂತ್‍ಕುಮಾರ್, ಎಂ.ನಾರಾಯಣಗೌಡ, ಬಮೂಲ್ ನಿರ್ದೇಶಕ ಭವಾನಿಶಂಕರ್ ಬೈರೇಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಣ್ಣ, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಚಂದ್ರಕಾ ಸೇರಿದಂತೆ ದಾನಿಗಳು, ಒಕ್ಕಲಿಗ ಮುಖಂಡರು, ಒಕ್ಕಲಿಗರ ಯುವ ವೇದಿಕೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2 ದಶಕಗಳ ನಂತರ ಸಕಲೇಶಪುರಕ್ಕಿಂದು ಮುಖ್ಯಮಂತ್ರಿ ಆಗಮನ
ಬಿಜೆಪಿ ರೈತ ಮೋರ್ಚಾ ವತಿಯಿಂದ ಸ್ವಚ್ಚತಾ ಅಭಿಯಾನ