ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕನಿಷ್ಠ ೧೦ ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ಇದಕ್ಕಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾರೀ ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಶಾಮಿಯಾನ ಹಾಕುವ ಕಾರ್ಯ ನಡೆದಿದ್ದರೆ, ಭದ್ರತೆಗಾಗಿ ಬ್ಯಾರಿಕೇಡ್ ನಿರ್ಮಾಣ ಸಹ ಎರಡು ದಿನಗಳಿಂದ ನಡೆಯುತ್ತಿದೆ. ಕಾರ್ಯಕ್ರಮದ ಬಿಗಿಭದ್ರತೆಗಾಗಿ ಕೊಡಗು, ಚಿಕ್ಕಮಗಳೂರು, ಮೈಸೂರು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಒಂದು ಸಾವಿರ ಪೊಲೀಸರು, ೨೦ ಡಿವೈಎಸ್‌ಪಿಗಳು, ೬೦ ಕ್ಕೂ ಅಧಿಕ ಪಿಎಸ್‌ಐಗಳು ಭದ್ರತೆಯಲ್ಲಿ ತೊಡಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದು ಎರಡು ದಿನಗಳಿಂದ ತಾಲೂಕಿನಲ್ಲೇ ಬೀಡುಬಿಟ್ಟಿದ್ದಾರೆ.

ವಿದ್ಯಾ ಕಾಂತರಾಜ್

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಮಲೆನಾಡ ಜನರು ಮುಖ್ಯಮಂತ್ರಿಗಳನ್ನು ಕಾತುರದಿಂದ ಕಾದಿದ್ದಾರೆ.

ಹೌದು! ತಾಲೂಕಿನ ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಚರ್ಚೆಗಾಗಿಯೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಸೆಪ್ಟೆಂಬರ್ 20ರಂದು ಆಗಮಿಸುತ್ತಿದ್ದಾರೆ. ಮಲೆನಾಡ ಜನರು ನಿರೀಕ್ಷೆಯ ಮಹಾಪೂರವನ್ನೇ ಹೊತ್ತಿದ್ದು ಯಾವ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂಬ ಉತ್ತರಕ್ಕೆ ಭಾನುವಾರದ ಸಂಜೆಯವರೆಗೆ ಕಾದುನೋಡಬೇಕಿದೆ.

ತಾಲೂಕಿನಲ್ಲಿ ವಾಣಿಜ್ಯ ಬೆಳೆಗಳಾದ ಕಾಳುಮೆಣಸು, ಕಾಫಿ ಹೊರತುಪಡಿಸಿ ಪ್ರಮುಖವಾಗಿ ಪ್ರವಾಸೋದ್ಯಮವನ್ನೇ ನಂಬಿರುವ ಜನರು ಸಾಕಷ್ಟು ಸಮಸ್ಯೆಗಳಿಂದ ತೊಳಲಾಡುತ್ತಿದ್ದಾರೆ. ಕಾಫಿ, ಮೆಣಸು ಹಾಗೂ ಭತ್ತ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಸಮಸ್ಯೆಯಾಗಿದ್ದು ಬೆಳೆದ ಬೆಳೆ ಕೈ ಹತ್ತುವುದು ದುಸ್ಥರವಾಗಿದೆ. ಅಲ್ಲದೇ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ವಾಣಿಜ್ಯ ಬೆಳೆಗಳು ಹಲವು ರೋಗಗಳಿಗೆ ತುತ್ತಾಗುತ್ತಿವೆ. ಇದಕ್ಕೆ ನಿಖರ ಪರಿಹಾರ ನೀಡಬೇಕು ಎಂಬ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಕಾಫಿ ಬೆಳೆಗಾರರು ಸರ್‍ಪೈಸಿ ಕಾನೂನು ಕುಣಿಕೆಗೆ ಸಿಲುಕಿ ತೊಳಲಾಡುತ್ತಿದ್ದು, ಬ್ಯಾಂಕ್‌ನಲ್ಲಿ ಸಾಲ ಮಾಡಿರುವ ಬೆಳೆಗಾರರ ತೋಟಗಳು ಬ್ಯಾಂಕಿನಿಂದ ಹರಾಜಿಗೆ ಒಳಪಡುತ್ತಿವೆ. ಕಾಫಿ ಕೃಷಿಯಿಂದ ಸರ್‍ಫೈಸಿ ಕಾನೂನು ಹೊರಗಿಡಿ ಎಂಬ ಬೇಡಿಕೆ ಸಹ ಈಡೇರದಾಗಿದೆ.

ಕಾಡಾನೆ ಸಮಸ್ಯೆಗೆ ಮುಕ್ತಿ ದೊರಕುವುದೇ:

ಕಳೆದ ಮೂರು ದಶಕಗಳಿಂದ ಕಾಡಾನೆ ಸಮಸ್ಯೆ ಅತಿಯಾಗಿದ್ದು ಈಗಾಗಲೇ ೮೮ ಜನರು ಕಾಡಾನೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಂಘಟನೆಗಳು ಹಾಗೂ ಸಾರ್ವಜನಿಕರು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಎಂಬ ಒಂದಂಶವನ್ನಿಟ್ಟುಕೊಂಡು ಹೋರಾಟ ಮಾಡುತ್ತಿದ್ದರಾದರೂ ಇದುವರೆಗೆ ಪರಿಹಾರ ದೊರಕಿಲ್ಲ. ಇದಲ್ಲದೆ ಡೀಮ್ಡ್ ಅಂಶ ಸಾಮಾನ್ಯ ಜನರು ಮನೆ ಕಟ್ಟಲು ಸಾಧ್ಯವಿಲ್ಲದಂತೆ ಹೈರಾಣಾಗಿಸಿದ್ದು ತಾಲೂಕಿನ ಎಲ್ಲಿಯೇ ಹೋದರೂ ಡೀಮ್ಡ್ ಎಂಬ ಅಂಶವನ್ನು ಮುಂದಿಟ್ಟು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದರಿಂದ ಸಾಮಾನ್ಯ ಜನರಿಂದ ಸರ್ಕಾರದ ಕುಡಿಯುವ ನೀರಿನ ಯೋಜನೆಗೂ ತೊಂದರೆ ನೀಡಲಾಗುತ್ತಿದೆ.

ಇದಲ್ಲದೆ ಹಾನುಬಾಳ್, ಹೆತ್ತೂರು ಹೋಬಳಿಯ ಸಾಕಷ್ಟು ಗ್ರಾಮಗಳು ಸೆಕ್ಷನ್ ೪ ಭೂತದಿಂದ ಕಂಗಲಾಗಿದ್ದು, ರಕ್ಷಿತಾರಣ್ಯ ಮಾಡುವ ನಿಟ್ಟಿನಲ್ಲಿ ಸೆಕ್ಷನ್ ೪ ಹೊರಡಿಸಿರುವ ಅರಣ್ಯ ಇಲಾಖೆ ಸಾಕಷ್ಟು ವಸತಿ ಗ್ರಾಮಗಳನ್ನು ಇದರೊಳಗೆ ಸೇರ್ಪಡೆಗೊಳಿಸಿರುವ ಕಾರಣ ಜನರು ಸಾಕಷ್ಟು ಹೋರಾಟ ನಡೆಸಿದರೂ ತಾರ್ಕಿಕ ಪರಿಹಾರ ದೊರೆಯದಾಗಿದೆ. ಇನ್ನು ಹೆತ್ತೂರು ಹೋಬಳಿಯ ವನಗೂರು ಹಾಗೂ ಹೊಂಗಡಹಳ್ಳ ಗ್ರಾಪಂ ವ್ಯಾಪ್ತಿಯ ೧೪ ಗ್ರಾಮಗಳ ೨೨೦೦ ಎಕರೆ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಅರಣ್ಯ ರೂಪಿಸುವ ಪ್ರಸ್ತಾವನೆ ಜಾರಿಯಾಗಿ ದಶಕಗಳೆ ಕಳೆಯುತ್ತ ಬಂದರೂ ತಾರ್ಕಿಕ ಅಂತ್ಯ ಕಾಣದಾಗಿದೆ. ಪರಿಣಾಮ ಸರ್ಕಾರ ಭೂಮಿಯನ್ನು ವಶಕ್ಕೆ ಪಡೆಯಲಿದೆ ಎಂದು ಭೂಮಿಯನ್ನು ಬೀಳು ಬಿಟ್ಟು ಸಾಕಷ್ಟು ಜನರು ದಶಕಗಳಿಂದ ಕಾದು ಕುಳಿತಿದ್ದು ಮುಖ್ಯಮಂತ್ರಿಗಳಿಂದ ಪರಿಹಾರ ದೊರೆಯಲಿದೆ ಎಂಬ ಆಶಾಭಾವನೆ ಈ ಭಾಗದ ಗ್ರಾಮಸ್ಥರದ್ದು.

ಇನ್ನು ಕಸ್ತೂರಿ ರಂಗನ್ ವರದಿ ಅಕ್ಷರಶಃ ಅವೈಜ್ಞಾನಿಕವಾಗಿದೆ ಎಂಬ ಅಂಶವನ್ನು ಮುಂದಿಟ್ಟು ಸಾಕಷ್ಟು ಹೋರಾಟ ನಡೆದಿವೆಯಾದರೂ ಆರನೇ ಕರಡು ಅಧಿಸೂಚನೆಯಲ್ಲಿದ್ದ ಒಂದಂಶವು ಏಳನೇ ಕರಡು ಅಧಿಸೂಚನೆಯಲ್ಲಿ ಹೊರತಾಗಿಲ್ಲ. ಇನ್ನು ತಾಲೂಕಿನ ಸಾಂಪ್ರದಾಯಿಕ ಬೆಳೆ ಎಂದು ಕರೆಸಿಕೊಳ್ಳುವ ಏಲಕ್ಕಿ ಬೆಳೆ ನಾಮಾವಶೇಷವಾಗಿದ್ದು ಬೆಳೆ ರಕ್ಷಿಸಲು ವಿಶೇಷ ಪ್ಯಾಕೇಜ್‌ ನೀಡುವ ಮೂಲಕ ಮಲೆನಾಡಿನ ಏಲಕ್ಕಿ ಬೆಳೆಗಾರರನ್ನು ರಕ್ಷಿಸಬೇಕು ಎಂಬ ಬೇಡಿಕೆ ಏಲಕ್ಕಿ ಬೆಳೆಗಾರರದ್ದು. ಏಲಕ್ಕಿ ಬೆಳೆಯನ್ನೆ ನಂಬಿದ್ದ ವಳಲಹಳ್ಳಿ ಹಾಗೂ ಹೊಂಗಡಹಳ್ಳ ಗ್ರಾಪಂ ವ್ಯಾಪ್ತಿಯ ಸುಮಾರು ೩೦ ಗ್ರಾಮಗಳ ಭೂಮಿ ಏಲಕ್ಕಿ ನಾಮಾವಶೇಷವಾದ ನಂತರ ಅರಣ್ಯವಾಗಿ ಬದಲಾಗಿರುವುದರಿಂದ ಇಲ್ಲಿನ ಜನರು ಬದುಕು ನಡೆಸುವುದೇ ದುಸ್ಥರವಾಗಿದೆ. ಇವರಿಗೆ ಹೊಸ ಬದುಕು ಕಲ್ಪಿಸುವ ಹೊಣೆ ಸರ್ಕಾರದ ಮೇಲಿದೆ.

ತಾಲೂಕಿನ ಜನರ ಜೀವನೋಪಾಯವಾಗಿರುವ ಪ್ರವಾಸೋದ್ಯಮ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು ತಾಲೂಕಿನಲ್ಲಿ ಎರಡು ಡಜನ್‌ಗೂ ಅಧಿಕ ಪ್ರವಾಸಿ ತಾಣಗಳಿವೆ. ವಾರವೊಂದಕ್ಕೆ ಕನಿಷ್ಠ ಲಕ್ಷಕ್ಕೂ ಅಧಿಕ ಜನರು ತಾಲೂಕಿನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇಷ್ಟೊಂದು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ತಾಲೂಕಿನ ಪ್ರವಾಸಿ ತಾಣಗಳಲ್ಲಿ ಯಾವುದೇ ಮೂಲ ಭೂತ ಸೌಕರ್ಯಗಳು ಇಲ್ಲದಾಗಿದೆ. ಇದಲ್ಲದೆ ತಾಲೂಕಿನಲ್ಲಿ ಇನ್ನೂರಕ್ಕೂ ಅಧಿಕ ಹೋಂಸ್ಟೇಗಳಿದ್ದು, ಕಳೆದ ಮೂರು ವರ್ಷಗಳಿಂದ ಹೋಂಸ್ಟೇ ಪರವಾನಗಿ ನವೀಕರಿಸದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎರಡು ದಶಕಗಳ ನಂತರ ಮುಖ್ಯಮಂತ್ರಿ ಆಗಮನ:

ತಾಲೂಕಿನ ಜನರು ಸಾಕಷ್ಟು ಸಮಸ್ಯೆಗಳ ನಡುವೆ ಜೀವಿಸುತ್ತಿದ್ದಾರೆ. ಇಂತಹ ತಾಲೂಕಿನ ಜನರ ಅಹವಾಲು ಕೇಳಲು ೨೦ ವರ್ಷಗಳ ನಂತರ ಮುಖ್ಯಮಂತ್ರಿಯೊಬ್ಬರು ಆಗಮಿಸುತ್ತಿರುವುದು ತಾಲೂಕಿನ ಜನರಿಗೆ ಸಹಜವಾಗಿ ಸಂತೋಷವನ್ನುಂಟು ಮಾಡಿದೆ. ೨೦೦೬ ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎಪಿಎಂಸಿ ಆವರಣಕ್ಕೆ ಆಗಮಿಸಿ ಜನರ ಆಹವಾಲು ಆಲಿಸಿದ್ದಲ್ಲದೆ ಸುಮಾರು ₹೩೫೦ ಕೋಟಿಗೂ ಅಧಿಕ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿದ್ದರು.

ತದನಂತರ ಯಡಿಯೂರಪ್ಪ ೨೦೦೯ ರಲ್ಲಿ ತಾಲೂಕಿಗೆ ಆಗಮಿಸಿದ್ದರಾದರೂ ಗುಂಡ್ಯ ಜಲವಿದ್ಯುತ್‌ ಯೋಜನೆಗೆ ಶಂಕು ನಡೆಸಿ ತೆರಳಿದ್ದರು. ಸದ್ಯ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಕೆಲವೇ ತಿಂಗಳಲ್ಲಿ ಪಟ್ಟಣಕ್ಕೆ ಆಗಮಿಸಿ ಹಿಂದೆ ಎಚ್.ಡಿ ಕುಮಾರಸ್ವಾಮಿ ಕಾರ್ಯಕ್ರಮ ನಡೆಸಿದ್ದ ಎಪಿಎಂಸಿ ಆವರಣದಲ್ಲೇ ಜನರ ಆಹವಾಲು ಕೇಳುತ್ತಿದ್ದಾರೆ.

ಭಾರೀ ಸಿದ್ಧತೆ:

ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕನಿಷ್ಠ ೧೦ ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ಇದಕ್ಕಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾರೀ ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಶಾಮಿಯಾನ ಹಾಕುವ ಕಾರ್ಯ ನಡೆದಿದ್ದರೆ, ಭದ್ರತೆಗಾಗಿ ಬ್ಯಾರಿಕೇಡ್ ನಿರ್ಮಾಣ ಸಹ ಎರಡು ದಿನಗಳಿಂದ ನಡೆಯುತ್ತಿದೆ. ಕಾರ್ಯಕ್ರಮದ ಬಿಗಿಭದ್ರತೆಗಾಗಿ ಕೊಡಗು, ಚಿಕ್ಕಮಗಳೂರು, ಮೈಸೂರು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಒಂದು ಸಾವಿರ ಪೊಲೀಸರು, ೨೦ ಡಿವೈಎಸ್‌ಪಿಗಳು, ೬೦ ಕ್ಕೂ ಅಧಿಕ ಪಿಎಸ್‌ಐಗಳು ಭದ್ರತೆಯಲ್ಲಿ ತೊಡಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದು ಎರಡು ದಿನಗಳಿಂದ ತಾಲೂಕಿನಲ್ಲೇ ಬೀಡುಬಿಟ್ಟಿದ್ದಾರೆ.