ಹನುಮ ಧ್ವಜ ಕೇಸ್‌: ಕೆರಗೋಡು ಇನ್ನೂ ಬೂದಿಮುಚ್ಚಿದ ಕೆಂಡ

KannadaprabhaNewsNetwork | Updated : Jan 31 2024, 01:03 PM IST

ಸಾರಾಂಶ

ಕೆರಗೋಡಿನಲ್ಲಿ ನಿಷೇಧಾಜ್ಞೆ ಮುಂದುವರಿಕೆಯಾಗಿದ್ದು, ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಗಲಭೆಗೆ ಸಂಬಂಧಿಸಿ 8 ಮಂದಿ ವಿರುದ್ಧ ಕೇಸ್‌ ದಾಖಲು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹನುಮಧ್ವಜ ತೆರವುಗೊಳಿಸಿದ ಬಳಿಕ ಪ್ರತಿಭಟನೆ, ಕಲ್ಲುತೂರಾಟದಿಂದ ಉದ್ವಿಗ್ನಗೊಂಡಿದ್ದ ಕೆರಗೋಡಿನಲ್ಲಿ ಪರಿಸ್ಥಿತಿ ಸದ್ಯ ಬೂದಿಮುಚ್ಚಿದ ಕೆಂಡದಂತಿದೆ. 

ಕಳೆದೆರಡು ದಿನಗಳಿಂದ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಗ್ರಾಮದಲ್ಲಿ ಮಂಗಳವಾರ ಪರಿಸ್ಥಿತಿ ಶಾಂತವಾಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಮುಂದುವರಿಸಲಾಗಿದೆ.

ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದ್ದು, ವಿವಾದಿತ ಧ್ವಜಸ್ತಂಭದ ಬಳಿ ಯಾರೂ ತೆರಳದಂತೆ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ, 20 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ತಿಳಿಸಿದ್ದಾರೆ.

8 ಮಂದಿ ವಿರುದ್ಧ ಎಫ್‌ಐಆರ್‌: ಗ್ರಾಮದಲ್ಲಿ ಹನುಮಧ್ವಜ ತೆರವು ಪ್ರಕರಣ ಹಾಗೂ ಪಾದಯಾತ್ರೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಎಂಟು ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. 

ಹನುಮಧ್ವಜ ತೆರವುಗೊಳಿಸುವ ವೇಳೆ ಕಾನೂನು ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಮೂವರು ಹಾಗೂ ಪಾದಯಾತ್ರೆ ಸಮಯದಲ್ಲಿ ಮಂಡ್ಯದ ಮಹಾವೀರ ವೃತ್ತದಲ್ಲಿ ಹರಿದು ಹಾಕಿದ ನಾಲ್ವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಇನ್ನುಳಿದಂತೆ ಕೆರಗೋಡು ಹಾಗೂ ಮಂಡ್ಯದಲ್ಲಿ ಶಾಂತಿ ಭಂಗ ಪ್ರಕರಣಕ್ಕೆ ಸಂಬಂಧಿಸಿ ಮಾಡಲಾಗಿರುವ ವಿಡಿಯೋ ಪರಿಶೀಲನೆ ನಡೆಸಲಾಗುತ್ತಿದ್ದು, ಅವರ ಗುರುತು ಪತ್ತೆ ಹಚ್ಚಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ದೂರು: ಈ ಮಧ್ಯೆ, ಕೆರಗೋಡು ಗ್ರಾಮದಲ್ಲಿ ಹನುಮಧ್ವಜವನ್ನು ಬಲವಂತವಾಗಿ ಕೆಳಗಿಳಿಸಿ ಅದೇ ಜಾಗದಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡರು ಎಸ್ಪಿಗೆ ದೂರು ನೀಡಿದರು.

ಕೆರಗೋಡು ಪಂಚಾಯಿತಿ ಅಧಿಕಾರಿ, ಮಂಡ್ಯ ಉಪವಿಭಾಧಿಕಾರಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅವರು ರಾಷ್ಟ್ರಧ್ವಜವನ್ನು ಹಾರಿಸುವ ಸಂಧರ್ಭದಲ್ಲಿ ಧ್ವಜ ಸಂಹಿತೆಯ ರೀತಿ ನೀತಿಗಳನ್ನು ಉಲ್ಲಂಘಿಸಿದ್ದಾರೆ. 

ಧ್ವಜ ಸ್ಥಂಭದ ಮಕ್ಕಾಲು ಭಾಗಕ್ಕೆ ತಿರಂಗವನ್ನು ಹಾರಿಸಿದ್ದಾರೆ. ಧ್ವಜ ಹಾರಿಸುವ ಸಂಧರ್ಭದಲ್ಲಿ ಕಾಲಿಗೆ ಚಪ್ಪಲಿ ಮತ್ತು ಶೂ ಧರಿಸಿದ್ದಾರೆ. ಧ್ವಜಾರೋಹಣ ಸಂಧರ್ಭದಲ್ಲಿ ಹಾಗೂ ಧ್ವಜ ಇಳಿಸುವ ಸಂಧರ್ಭದಲ್ಲಿ ನಿಯಮಾನುಸಾರ ರಾಷ್ಟ್ರಗೀತೆ ಹಾಡಿಲ್ಲ ಎಂದು ದೂರಿದ್ದಾರೆ.

Share this article