ಕೆರಗೋಡು ಗ್ರಾಮ ಈಗ ಸಂಪೂರ್ಣ ‘ಕೇಸರಿಮಯ’...!

KannadaprabhaNewsNetwork |  
Published : Feb 04, 2024, 01:30 AM IST
೩ಕೆಎಂಎನ್‌ಡಿ-೧ಮಂಡ್ಯ ತಾಲೂಕು ಕೆರಗೋಡು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮನ ಭಾವಚಿತ್ರವಿರುವ ಧ್ವಜಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಭುಗಿಲೆದ್ದಿರುವ ಧ್ವಜ ಹೋರಾಟ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಶನಿವಾರದಿಂದ ಬಿಜೆಪಿಯವರು ಮನೆ ಮನೆಗಳ ಮೇಲೆ ಹನುಮ ಧ್ವಜ ಹಾರಿಸುವ ಅಭಿಯಾನದ ಮೂಲಕ ಹೋರಾಟಕ್ಕೆ ಹೊಸ ಸ್ವರೂಪ ನೀಡಿದ್ದಾರೆ. ಇದರಿಂದ ಕೆರಗೋಡಿನ ಅಂಗಡಿ, ಮನೆಗಳ ಮೇಲೆಲ್ಲಾ ಹನುಮನ ಭಾವಚಿತ್ರವಿರುವ ಕೇಸರಿ ಧ್ವಜ ಹಾರಾಡುತ್ತಿರುವುದು ಕಂಡುಬಂದಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಭುಗಿಲೆದ್ದಿರುವ ಧ್ವಜ ಹೋರಾಟ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಶನಿವಾರದಿಂದ ಬಿಜೆಪಿಯವರು ಮನೆ ಮನೆಗಳ ಮೇಲೆ ಹನುಮ ಧ್ವಜ ಹಾರಿಸುವ ಅಭಿಯಾನದ ಮೂಲಕ ಹೋರಾಟಕ್ಕೆ ಹೊಸ ಸ್ವರೂಪ ನೀಡಿದ್ದಾರೆ. ಇದರಿಂದ ಕೆರಗೋಡಿನ ಅಂಗಡಿ, ಮನೆಗಳ ಮೇಲೆಲ್ಲಾ ಹನುಮನ ಭಾವಚಿತ್ರವಿರುವ ಕೇಸರಿ ಧ್ವಜ ಹಾರಾಡುತ್ತಿರುವುದು ಕಂಡುಬಂದಿತು.

ಕೆರಗೋಡಿನ ಶ್ರೀಆಂಜನೇಯ ದೇವಸ್ಥಾನದಲ್ಲಿ ದೇವರ ಎದುರು ಹನುಮ ಧ್ವಜ ಇಟ್ಟು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬೆಳಗ್ಗೆ ೧೦ ಗಂಟೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಅಭಿಯಾನದ ಮೂಲಕ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಹಾರಾಟಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಪಡಿಸಿದರು.

ನಂತರ ಬಿಜೆಪಿ ಮುಖಂಡರು ಮನೆಗಳು, ಅಂಗಡಿಗಳಿಗೆ ತೆರಳಿ ಹನುಮನ ಭಾವಚಿತ್ರವಿರುವ ಧ್ವಜವನ್ನು ವಿತರಣೆ ಮಾಡಿದರು. ಹಲವಾರು ಮನೆಗಳ ಮೇಲೇರಿ ಧ್ವಜ ಹಾರಿಸಿ ಸಂಭ್ರಮಿಸಿದರು. ಅಂಗಡಿಯವರೂ ಕೂಡ ತಮ್ಮ ಅಂಗಡಿಗಳ ಮುಂಭಾಗ ಹಾಗೂ ಮೇಲೆ ಹನುಮ ಧ್ವಜ ಪ್ರತಿಷ್ಠಾಪಿಸಿ ಅಭಿಮಾನ ಮೆರೆದರು. ಇದರಿಂದ ಕೆರಗೋಡು ಸಂಪೂರ್ಣವಾಗಿ ಕೇಸರಿಮಯವಾದಂತೆ ಗೋಚರಿಸಿತು.

ಮನೆಗೆ ಹಾಕಿದ ಹನುಮ ಧ್ವಜಕ್ಕೆ ಗ್ರಾಮಸ್ಥರೊಬ್ಬರು ಪೂಜೆ ಸಲ್ಲಿಸಿದರು. ಬಾವುಟಕ್ಕೆ ಪೂಜೆ ಮಾಡಿ ಭಾವುಕರಾದ ಗ್ರಾಮಸ್ಥರು. ಬಾವುಟ ತೆಗೆದಾಗಿನಿಂದಲೂ ಊರಿನಲ್ಲಿ ಯಾರೂ ನೆಮ್ಮದಿಯಿಂದ ಇಲ್ಲ. ಸರಿಯಾಗಿ ಊಟ ಮಾಡಿಲ್ಲ. ಶ್ರೀಆಂಜನೇಯಸ್ವಾಮಿ ಆಕಾಶದಲ್ಲಿ ಹಾರಾಡುತ್ತಿದ್ದ ವೇಳೆ ಯಾರಿಗೂ ತೊಂದರೆ ಕೊಟ್ಟಿರಲಿಲ್ಲ. ಗ್ರಾಮದಲ್ಲಿ ಮತ್ತೆ ನೆಮ್ಮದಿ ನೆಲೆಸಬೇಕಾದರೆ ಮತ್ತೆ ಹನುಮ ಧ್ವಜ ಹಾರಾಡಬೇಕು ಎಂಬ ಮಾತುಗಳನ್ನು ಹೇಳಿದರು.

ಕೆರಗೋಡು ಗ್ರಾಮದ ಪ್ರತಿ ಬೀದಿ ಬೀದಿಗಳಲ್ಲಿರುವ ಮನೆಗಳಿಗೆ ತೆರಳಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾರತ್ ಮಾತಾ ಕೀ ಎಂದು ಘೋಷಣೆಗಳನ್ನು ಕೂಗುತ್ತಾ ಧ್ವಜ ವಿತರಣೆ ಮಾಡಿದರು. ಗ್ರಾಮಸ್ಥರು ಕೂಡ ಬಿಜೆಪಿಯವರನ್ನು ಆತ್ಮೀಯವಾಗಿ ಮನೆಯೊಳಗೆ ಬರಮಾಡಿಕೊಂಡು ಧ್ವಜವನ್ನು ಸ್ವೀಕರಿಸಿ ಮನೆಗಳು ಹಾಗೂ ಅಂಗಡಿಗಳ ಮೇಲೆ ಪ್ರತಿಷ್ಠಾಪಿಸುತ್ತಿದ್ದುದು ಎಲ್ಲೆಡೆ ಕಂಡುಬಂದಿತು.

ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಿವೇಕ್, ಗ್ರಾಪಂ ಮಾಜಿ ಸದಸ್ಯ ಮಹೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!